Advertisement

ಭಾರತ -ಬಾಂಗ್ಲಾದೇಶ ನಡುವಿನ ಬಾಂಧವ್ಯ ಭಾವನಾತ್ಮಕ: ಹರ್ಷವರ್ಧನ್‌

08:02 PM Oct 23, 2021 | Team Udayavani |

ಬೆಂಗಳೂರು: “ಭಾರತ- ಬಾಂಗ್ಲಾದೇಶದ ನಡುವಿನ ಬಾಂಧವ್ಯ ಅತ್ಯಂತ ಗಟ್ಟಿ ಮತ್ತು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದು, ಇದು ವಾಣಿಜ್ಯ ಸೇರಿದಂತೆ ಉಳಿದ ಯಾವುದೇ ಪ್ರಕಾರದ ಮೈತ್ರಿಗಳಿಗಿಂತ ಆಳವಾದದ್ದಾಗಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಅಭಿಪ್ರಾಯಪಟ್ಟರು.

Advertisement

1971ರಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ವಿಜಯದ ಸ್ಮರಣಾರ್ಥ ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ಹಮ್ಮಿಕೊಂಡ ಮೂರು ದಿನಗಳ ಸುವರ್ಣ ಮಹೋತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು ಅವರು, “ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಾಂಧವ್ಯ ಈಗ 50 ವಸಂತಗಳನ್ನು ಪೂರೈಸಿದೆ. ಈ ಸುದೀರ್ಘ‌ ಪಯಣದ ನಂತರ ಮೈತ್ರಿ ಮತ್ತಷ್ಟು ಪ್ರಬುದ್ಧಗೊಂಡಿದ್ದು, ಬರುವ ದಿನಗಳಲ್ಲಿ ಕೂಡ ಇದನ್ನು ಕಾಪಾಡಿಕೊಂಡು ಮುಂದುವರಿಯಲು ನಾವು ಬದ್ಧ’ ಎಂದರು.

“ಮುಕ್ತಿಜೋಧಾ’ (ಬಾಂಗ್ಲಾದೇಶದ ವಿಮೋಚನೆಗೆ ಹೋರಾಡಿದವರು)ಗಳು ಈಗಲೂ ಎರಡೂ ದೇಶಗಳ ನಡುವಿನ ಸೇತುವೆಗಳಾಗಿದ್ದಾರೆ. ಈಗಲೂ ಭದ್ರತಾ ವಿಷಯಗಳು ನಿಯಮಿತವಾಗಿ ವಿನಿಮಯ ಆಗುತ್ತಿರುತ್ತವೆ. ಬಾಂಗ್ಲಾದ ಆರ್ಥಿಕ ಬೆಳವಣಿಗೆ, ಸಮೃದ್ಧಿಯು ಭಾರತದ ಉಳಿದ ಯಾವುದೇ ವಾಣಿಜ್ಯ ಮತ್ತಿತರ ಮೈತ್ರಿಗಿಂತ ಗಟ್ಟಿಯಾದುದು ಮತ್ತು ಮಹತ್ವದ್ದಾಗಿದೆ ಎಂದೂ ಬಣ್ಣಿಸಿದರು.

ಮೈತ್ರಿ ವಿಶ್ವಕ್ಕೆ ಮಾದರಿ
ಈ ಎರಡೂ ನೆರೆಯ ದೇಶಗಳ ನಡುವಿನ ಸಂಬಂಧವು ವಿಶ್ವಕ್ಕೆ ಮಾದರಿ ಆಗಿದೆ. ಬಾಂಗ್ಲಾದೇಶದ ವಿಮೋಚನೆ ಸಂದರ್ಭದಲ್ಲಿ ಶುರುವಾದ ಈ ಸ್ನೇಹ- ಗೌರವ, ಪರಸ್ಪರ ಹೊಂದಾಣಿಕೆಯು ಈಗಲೂ ವಿವಿಧ ರೂಪದಲ್ಲಿ ವಿಸ್ತಾರಗೊಂಡಿದೆ ಎಂದು ವಿಶ್ಲೇಷಿಸಿದ ಅವರು, ಮಾನವೀಯತೆ, ರಾಜಕೀಯ ಮತ್ತು ರಾಜತಾಂತ್ರಿಕತೆ ಅಂಶಗಳ ಆಧಾರದ ಮೇಲೆ ನಡೆದ ಆ ಯುದ್ಧದಲ್ಲಿ ಐತಿಹಾಸಿಕವಾಗಿತ್ತು. ನಂತರದ ದಿನಗಳಲ್ಲಿ ಅದು ಮೈತ್ರಿಗೆ ಮೈಲುಗಲ್ಲಾಯಿತು ಎಂದು ತಿಳಿಸಿದರು.

ಇದನ್ನೂ ಓದಿ:ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

Advertisement

ಕೋವಿಡ್‌ ಸಾಂಕ್ರಾಮಿಕ ಕಡಿಮೆ ಆಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮೊದಲು ಭೇಟಿ ನೀಡಿದ್ದು ಬಾಂಗ್ಲಾದೇಶಕ್ಕೆ. ಆ ದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಬಾಂಗ್ಲಾ ವಿಮೋಚನೆಯ ಸಂದರ್ಭದಲ್ಲಿ ನಮ್ಮ ಸೈನಿಕರು ವಹಿಸಿದ ಪಾತ್ರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಾಂಗ್ಲಾದ ಆಶ್‌ಗಂಜ್‌ ಟೌನ್‌ನಲ್ಲಿ 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಹುತಾತ್ಮ ಯೋಧರಿಗೆ ಸ್ಮಾರಕ ನಿರ್ಮಾಣವಾಗುತ್ತಿದೆ. ಇದು ಉಭಯ ದೇಶಗಳ ನಡುವಿನ ಗಾಢ ಸ್ನೇಹದ ಪ್ರತೀಕ ಎಂದು ವಿದೇಶಾಂಗ ಕಾರ್ಯದರ್ಶಿ ವ್ಯಾಖ್ಯಾನಿಸಿದರು.

ಬಾಂಗ್ಲಾದ ಅಭಿವೃದ್ಧಿ ಮತ್ತು ಆರ್ಥಿಕ ಸಮೃದ್ಧತೆಯ ದಾರಿಯಲ್ಲಿ ಭಾರತ ನೈಜ ಗೆಳೆಯನಾಗಿ ಜತೆ ನಿಲ್ಲಲಿದೆ. ಮುಂಬರುವ ದಿನಗಳಲ್ಲಿ ಬಾಂಗ್ಲಾದೊಂದಿಗೆ ರೈಲು, ರಸ್ತೆ ಮತ್ತು ಸಾರಿಗೆ ಸಂಪರ್ಕ ವೃದ್ಧಿಸುವುದು ಸರ್ಕಾರದ ಆದ್ಯತೆ ಆಗಿರಲಿದೆ ಎಂದು ಹೇಳಿದರು.

18 ದೇಶಗಳಲ್ಲಿ ಮೈತ್ರಿ ದಿನಾಚರಣೆ
ಭಾರತವು 1971ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಜಗತ್ತಿನ ಮೊದಲ ದೇಶ. ಇದರ ಸವಿನೆನಪಿಗಾಗಿ ಡಿಸೆಂಬರ್‌ 6ರಂದು ಭಾರತ ಮತ್ತು ಬಾಂಗ್ಲಾದೇಶವನ್ನು ಹೊರತುಪಡಿಸಿ 18 ರಾಷ್ಟ್ರಗಳ ರಾಜಧಾನಿಯಲ್ಲಿ ಮೈತ್ರಿ ದಿವಸ ಆಚರಣೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌ ಇದೇ ವೇಳೆ ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next