ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಸ್ನೇಹಿತನ ತಂಗಿಯನ್ನು ವಿವಾಹಿತನೊಬ್ಬ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ದೀಪಾಂಜಲಿ ನಗರದ ನಿವಾಸಿ ಶೋಭಾ (24) ಕೊಲೆಯಾದ ಯುವತಿ. ತುಮಕೂರು ಮೂಲದ ಗಿರೀಶ್(30) ಆರೋಪಿ. ಇದೇ ಸಂದರ್ಭದಲ್ಲಿ ಶೋಭಾ ಅವರನ್ನು ರಕ್ಷಿಸಲು ಮುಂದಾದ ಸ್ಥಳೀಯ ನಿವಾಸಿ ವಿಜಯಮ್ಮ (62) ಅವರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ನಾಪತ್ತೆಯಾಗಿರುವ ಆರೋಪಿಯ ಪತ್ತೆಗಾಗಿ ಎರಡು ವಿಶೇಷ ತಂಡ ರಚಿಸಲಾಗಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಗಿರೀಶ್ ಪೈಂಟರ್ ಕೆಲಸ ಮಾಡುತ್ತಿದ್ದು, ಶೋಭಾ ಪದವವೀ ಧರೆಯಾಗಿದ್ದರು. ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ ಮೃತಳ ಅಣ್ಣ ಹಾಗೂ ಗಿರೀಶ್ ಸ್ನೇಹಿತರಾಗಿದ್ದರು. ಹೀಗಾಗಿ, ಶೋಭಾ ಮತ್ತು ಗಿರೀಶ್ ನಡುವೆ ಆತ್ಮೀಯತೆ ಇತ್ತು. ಈ ಹಿನ್ನೆಲೆಯಲ್ಲಿ ಪದೇ ಪದೇ ಮನೆಗೆ ಬಂದು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಶೋಭಾ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.
7 ಬಾರಿ ಇರಿದ: ಶೋಭಾ ಅವರನ್ನು ಪ್ರೀತಿಸುತ್ತಿದ್ದ ಗಿರೀಶ್ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕೆಯ ಮನೆ ಬಳಿ ಬಂದು ಬಟ್ಟೆ ಒಗೆಯುತ್ತಿದ್ದ ಆಕೆ ಬಳಿ ಮತ್ತೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಇದಕ್ಕೆ ಮೃತ ಶೋಭಾ ನಿರಾಕರಿಸಿದ್ದಾರೆ. ಆಕ್ರೋಶಗೊಂಡ ಗಿರೀಶ್ ಆಕೆ ಜತೆ ಜಗಳ ತೆಗೆದಿದ್ದು, ಇಬ್ಬರು ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಶೋಭಾ ಅವರ ಹೊಟ್ಟೆ, ಕೈ, ಕುತ್ತಿಗೆ ಭಾಗಕ್ಕೆ 7 ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಶೋಭಾ, ಮನೆಯೊಳಗೆ ಹೋಗಲು ಯತ್ನಿಸಿ, ಕೂಗಿಕೊಂಡಿದ್ದಾರೆ.
ಗಲಾಟೆ ಕೇಳಿಸಿಕೊಂಡ ಸ್ಥಳೀಯ ನಿವಾಸಿ ವಿಜಯಮ್ಮ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಆರೋಪಿಯು ವಿಜಯಮ್ಮ ಅವರ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.ರಕ್ತಸ್ರಾವದಿಂದ ಬಿದ್ದು ನರಳುತ್ತಿದ್ದ ಇಬ್ಬರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಶೋಭಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಜಯಮ್ಮ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಗೆ ಅನಾರೋಗ್ಯ: ತುಮಕೂರು ಮೂಲದ ಗಿರೀಶ್ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಅನಾರೋಗ್ಯ ಕಾರಣದಿಂದ ಆಕೆ ಮತ್ತು ಮಕ್ಕಳನ್ನು ತುಮಕೂರಿನಲ್ಲಿ ಬಿಟ್ಟು ಬಂದಿದ್ದು, ದೀಪಾಂಜಲಿನಗರದ ರೈಲ್ವೆ ಗೇಟ್ ಬಳಿ ಯ ರೂಂವೊಂದರಲ್ಲಿ ಒಬ್ಬನೇ ವಾಸವಿದ್ದ. ಇತ್ತ ಖಾಸಗಿ ಸಂಸ್ಥೆಯೊಂದಲ್ಲಿ ಕೆಲಸ ಮಾಡುತ್ತಿರುವ ಅಣ್ಣನೊಂದಿಗೆ ಶೋಭಾ ಆರೋಪಿಯ ರೂಂನ ಪಕ್ಕದಲ್ಲೇ ವಾಸವಿದ್ದರು. ಹೀಗಾಗಿ, ಇಬ್ಬರ ನಡುವೆ ಆತ್ಮೀಯತೆ ಇತ್ತು. ಇದನ್ನೇ ದುರುಪಯೋಗ ಪಡಿಸಿಕೊಂಡ ಗಿರೀಶ್, ಶೋಭಾ ಅವರಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ.
ಸ್ನೇಹಕ್ಕೂ ಮೀರಿದ ಸಂಬಂಧ: ಪತ್ನಿಯನ್ನು ತ್ಯಜಿಸಿದ್ದ ಗಿರೀಶ್ ಹಾಗೂ ಶೋಭಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧವಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮೃತಳಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ, ಶೋಭಾ ಗಿರೀಶ್ ಜತೆ ಎರಡನೇ ವಿವಾಹವಾಗಲು ನಿರಾಕರಿಸಿದ್ದಳು. ಇದೇ ವಿಚಾರವಾಗಿ ಇಬ್ಬರು ನಡುವೆ ಗಲಾಟೆ ಕೂಡ ನಡೆಯುತ್ತಿತ್ತು. ಇಬ್ಬರ ನಡುವೆ ನಿತ್ಯ ದೂರವಾಣಿ ಸಂಭಾಷಣೆ ನಡೆದಿರುವ ಬಗ್ಗೆಯೂ ಮಾಹಿತಿಯಿದೆ ಎಂದು ಮೂಲಗಳು ತಿಳಿಸಿವೆ.