Advertisement

Karnataka: ಮುಂದಿನ ವರ್ಷ ಎಂಜಿನಿಯರಿಂಗ್‌ ಸೀಟ್‌ಗಳಲ್ಲಿ ಕಡಿತ

11:50 PM Oct 04, 2023 | Team Udayavani |

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ನಿಯಂತ್ರಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಕಾನೂನು ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ಮಾಡುವ ಮೂಲಕ ಮುಂದಿನ ಶೈಕ್ಷಣಿಕ ವರ್ಷ ದಿಂದ ವಿದ್ಯಾರ್ಥಿಗಳ ದಾಖಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಅವರು ಮಾತ ನಾಡಿ, ರಾಜ್ಯ ಖಾಸಗಿ ವಿಶ್ವವಿದ್ಯಾನಿಲಯಗಳು, ಸಂಸ್ಥೆಗಳು ನಿಯಮ ಬಾಹಿರವಾಗಿ ವಿದ್ಯಾರ್ಥಿಗಳಿಗೆ ಭಾರಿ ಪ್ರಮಾಣದಲ್ಲಿ ಪ್ರವೇಶ ನೀಡುತ್ತಿರುವುದಕ್ಕೆ ಲಗಾಮು ಹಾಕುವಂತೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ಗೆ ಪತ್ರ ಬರೆದಿದ್ದೆ. ಪರಿಷತ್‌ನ ಮುಖ್ಯಸ್ಥರು ಈ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸರಕಾರಕ್ಕಿದೆ ಎಂದು ಮರು ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

ಸೂಕ್ತ ಪ್ರಮಾಣದ ಪ್ರಯೋಗಾಲಯ ಮತ್ತು ಬೋಧಕ ಸಿಬಂದಿಗಳಿಲ್ಲದೆ ಎಂಜಿನಿಯರಿಂಗ್‌ ಸಂಸ್ಥೆಗಳನ್ನು ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ಇರುವ ಸೌಲಭ್ಯ ಮತ್ತು ಬೋಧಕ ಸಿಬಂದಿಗಳಿಗೆ ತಕ್ಕಷ್ಟು ಮಾತ್ರ ದಾಖಲಾತಿ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈ ಬಾರಿ ಖಾಸಗಿ ಕಾಲೇಜುಗಳ ಸುಮಾರು 9,000 ಸೀಟುಗಳನ್ನು ಕಡಿತ ಮಾಡುವ ಚಿಂತನೆ ನಡೆಸಿದ್ದೆವು. ಆದರೆ ಕೊನೆಯ ಕ್ಷಣದಲ್ಲಿ ಗೊಂದಲ ಸೃಷ್ಟಿಯಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಪ್ರವೇಶ ನೀಡಿದ್ದೇವೆ. ಆದರೆ ಮುಂದಿನ ಬಾರಿ ಈ ರೀತಿ ರಿಯಾಯಿತಿ ನೀಡುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಸೌಲಭ್ಯಗಳನ್ನು ಪರಿಗಣಿಸಿಯೇ ಖಾಸಗಿ ಕಾಲೇಜುಗಳಿಗೆ ಪ್ರವೇಶ ಸಂಖ್ಯೆ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯಿಂದ ಕಾಲಮಿತಿ ನಿಗದಿ ಪಡಿಸುತ್ತೇವೆ. ಆ ಅವಧಿಯೊಳಗೆ ನಿರಾಪೇಕ್ಷಣ ಪತ್ರ ಪಡೆಯಬೇಕು ಮತ್ತು ಎಷ್ಟು ಸೀಟುಗಳಿಗೆ ಅನುಮತಿ ಇರುತ್ತದೆಯೋ ಅಷ್ಟು ಸೀಟುಗಳನ್ನು ಸೀಟ್‌ ಮ್ಯಾಟ್ರಿಕ್ಸ್‌ನಲ್ಲಿ ನೀಡಲಾಗುವುದು ಎಂದು ಡಾ| ಸುಧಾಕರ್‌ ಹೇಳಿದ್ದಾರೆ.

ಎಂಬಿಬಿಎಸ್‌ ಮಾದರಿ ಸೀಟ್‌ ನಿಗದಿ

Advertisement

ಹೊಸ ಎಂಜಿನಿಯರಿಂಗ್‌ ಕಾಲೇಜ್‌ಗೆ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗದು. ಆದರೆ ಬೆಂಗಳೂರಿನಂತಹ ನಗರದಲ್ಲಿ ಈಗಿರುವ ಕಾಲೇಜುಗಳಲ್ಲಿ ಮನಸೋ ಇಚ್ಛೆ ಪ್ರವೇಶ ನೀಡುತ್ತಿರುವುದನ್ನು ನಿಯಂತ್ರಿಸುತ್ತೇವೆ. ಮೆಡಿಕಲ್‌ ಶಿಕ್ಷಣದಲ್ಲಿ ಹೇಗೆ ಜನಸಂಖ್ಯೆ ಆಧಾರದಲ್ಲಿ ವೈದ್ಯಕೀಯ ಸೀಟ್‌ ನೀಡಿಕೆಯನ್ನು ನಿಗದಿ ಮಾಡಲಾಗುತ್ತಿದೆಯೋ, ಅದೇ ರೀತಿ ಗುಣಮಟ್ಟದ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಇಂತಹ ನೀತಿ ಅಳವಡಿಕೆಯ ಅಗತ್ಯವಿದೆ ಎಂದು ಡಾ| ಸುಧಾಕರ್‌ ಹೇಳಿದರು.

ಎಸ್‌ಇಪಿಗೆ ವಾರದೊಳಗೆ ಮುಖ್ಯಸ್ಥರ ನೇಮಕ
ರಾಜ್ಯ ಶಿಕ್ಷಣ ನೀತಿ ರಚನೆಗೆ ವಾರದೊಳಗೆ ಸಮಿತಿಯ ಅಧ್ಯಕ್ಷರ ಹೆಸರನ್ನು ಪ್ರಕಟಿಸಲಾಗುವುದು. ಮುಂದೆ ಗೊಂದಲ ಸೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಪೂರ್ವಾಪರವನ್ನು ಪರಿಶೀಲಿಸಿ ನೇಮಕ ನಡೆಸಲಾಗುವುದು ಎಂದು ಸಚಿವ ಡಾ| ಸುಧಾಕರ್‌ ಹೇಳಿದರು. ಎಲ್ಲರನ್ನೂ ಒಳಗೊಂಡ, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡಿರುವ ಸಮಗ್ರ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಸಮಿತಿಯ ಬಗ್ಗೆ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಒಂದು ವೇಳೆ ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮೊದಲು ಸಮಿತಿಯು ಪೂರ್ವಭಾವಿ ವರದಿ ನೀಡಿದರೆ ಆ ವರದಿಯನ್ನು ಆಧಾರವಾಗಿರಿಸಿಕೊಂಡು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸುಧಾಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next