Advertisement
ಜಾನುವಾರುಗಳಿಗೆ ಕಳೆದ ವರ್ಷ ಚರ್ಮ ಗಂಟು ರೋಗ ತೀವ್ರವಾಗಿ ಬಾಧಿಸಿತ್ತು. ಈ ವರ್ಷವೂ ಇದರ ಆತಂಕದಲ್ಲಿದ್ದ ರೈತರು ಈಗ ನಿರಾಳ ವಾಗಬಹುದು. ಈವರೆಗೂ ಜಿಲ್ಲೆಯಲ್ಲಿ ಚರ್ಮ ಗಂಟು ರೋಗದ ಯಾವ ಲಕ್ಷಣವೂ ಕಂಡು ಬಂದಿಲ್ಲ. ಇದರ ಜತೆಗೆ ಬಾಯಿಬೇನೆ, ಕಾಲುಬೇನೆ, ಗಂಟುಬೇನೆ, ಚಪ್ಪೇಬೇನೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ಲಕ್ಷಣಗಳೂ ಕಂಡು ಬಂದಿಲ್ಲ. ಇದಲ್ಲದೇ ಜಿಲ್ಲೆಯಲ್ಲಿ ಇದೀಗ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಬ್ರೂಸ್ಸೆಲ್ಲೊಸಿಸ್ (ಕಂದು ರೋಗ) ರೋಗಕ್ಕೆ ಲಸಿಕಾ ಅಭಿಯಾನ ಶುರು ಮಾಡಲಾಗಿದ್ದು, ಈ ರೋಗದ ನಿಯಂತ್ರಣಕ್ಕೂ ಮೂರು ಹಂತದಲ್ಲಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ 168 ಗ್ರಾಮಗಳ 1789 ಜಾನುವಾರುಗಳಲ್ಲಿ ಚರ್ಮ ಗಂಟು ರೋಗ (ಲಂಪಿ ಸ್ಕಿನ್‌ಡಿಸೀಸ್) ಕಾಣಿಸಿಕೊಂಡಿತ್ತು. ಅಕ್ಟೋಬರ್ ಅಂತ್ಯಕ್ಕೆ ಜಿಲ್ಲೆಯ ಐದು ತಾಲೂಕಿನ 291 ಗ್ರಾಮಗಳ 5570 ಜಾನುವಾರುಗಳಲ್ಲಿ ಪತ್ತೆಯಾಗಿತ್ತು. ಈ ಪೈಕಿ ಕಲಘಟಗಿ ತಾಲೂಕಿನ 75, ಧಾರವಾಡ ತಾಲೂಕಿನ 72, ಹುಬ್ಬಳ್ಳಿ ತಾಲೂಕಿನ 58, ಕುಂದಗೋಳ ತಾಲೂಕಿನ 53, ನವಲಗುಂದ ತಾಲೂಕಿನ 33 ಗ್ರಾಮಗಳ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ರೋಗ ಹತೋಟಿಗಾಗಿ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟ ನಿಷೇಧಿಸಿ ಸೆ.28ರಿಂದಲೇ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ರೋಗ ಹತೋಟಿಗಾಗಿ ಜಿಲ್ಲೆಗೆ ತರಿಸಿದ್ದ 70 ಸಾವಿರ ಲಸಿಕೆಯನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿತ್ತು. ಪರಿಣಾಮ ಪೂರ್ಣ ಪ್ರಮಾಣದಲ್ಲಿ ರೋಗ ಹತೋಟಿಗೆ ಬಂದಿತ್ತು. ಇದಾದ ಬಳಿಕವೇ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಾಟಕ್ಕೆ ಹೇರಿದ್ದ ನಿಷೇಧ ತೆರವು ಮಾಡಲಾಗಿತ್ತು. ಇದನ್ನೂ ಓದಿ:ನಿಷ್ಕಲ್ಮಷ ಪ್ರೀತಿಗೆ ಋಣಿ, ತವರು ಮನೆಗೆ ಬಂದಷ್ಟು ಖುಷಿಯಾಗಿದೆ: ನಟ ಅನಂತ್ ನಾಗ್
Related Articles
Advertisement
ಎಲ್ಲಾ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕಂದು ರೋಗ ಮುಖ್ಯವಾಗಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ರೋಗಗ್ರಸ್ತ ಪ್ರಾಣಿಯಲ್ಲಿ ಗರ್ಭಪಾತ, ಅನಾರೋಗ್ಯ, ಕಡಿಮೆ ಹಾಲಿನ ಇಳುವರಿ, ಬಂಜೆತನ ಉಂಟಾಗಿ ರೈತರಿಗೆ ಆರ್ಥಿಕ ನಷ್ಟ ಉಂಟು ಮಾಡುತ್ತದೆ. ಹೀಗಾಗಿ 4-8 ತಿಂಗಳು ಮೇಲ್ಪಟ್ಟ ಎಲ್ಲಾ ಹೆಣ್ಣು ಕರುಗಳಿಗೆ ತಪ್ಪದೇ ಒಮ್ಮೆಯಾದರೂಬ್ರೂಸ್ಸೆಲ್ಲಾ ಲಸಿಕೆ ಹಾಕಿಸುವುದರಿಂದ ಕರುಗಳಲ್ಲಿ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸಿ, ಈ ರೋಗ ಬಾಧೆಯಿಂದ ಪಾರಾಗಿಸಬಹುದು. ಈ ಹಿನ್ನೆಲೆಯಲ್ಲಿ ರೈತಾಪಿ ಸಮುದಾಯ ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸಿದರೆ ಒಳಿತು. ಪ್ರಾಣಿಜನ್ಯ ರೋಗದಿಂದ ಮನುಷ್ಯರಿಗೂ ಅಪಾಯ
ಕಂದು ರೋಗ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಕ ರೋಗವೂ ಆಗಿದೆ. ಮುಖ್ಯವಾಗಿ ದೇಹದ ಸ್ರವಿಸುವ ವಸ್ತುಗಳಾದ ಹಾಲು, ವೀರ್ಯದಿಂದ ಹರಡುತ್ತದೆ. ಮನುಷ್ಯರಲ್ಲಿ ಮರುಕಳಿಸುವ ಜ್ವರ, ವಿಪರೀತ ರಾತ್ರಿ ಬೆವರುವಿಕೆ, ಗರ್ಭಪಾತ, ಬಂಜೆತನ ಇವೇ ಮುಖ್ಯವಾದ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದ ಪಶುಪಾಲಕರು, ಕೃತಕ ಗರ್ಭಧಾರಣಾ ಕಾರ್ಯಕರ್ತರು, ಪಶು ಪರಿವೀಕ್ಷಕರು, ಪಶುವೈದ್ಯಾ ಧಿಕಾರಿಗಳು, ಕಸಾಯಿಖಾನೆಯಲ್ಲಿ ಕೆಲಸ ಮಾಡುವವರು ಈ ರೋಗದ ಹರಡುವಿಕೆ ಬಗ್ಗೆ ಜಾಗೃತಿ ಇರಬೇಕು. ರೋಗಗ್ರಸ್ತ ಜಾನುವಾರುಗಳು, ಗರ್ಭಪಾತದ ಮಾಸ, ರಕ್ತ ಮತ್ತು ಇತರೇ ಸ್ರವಿಸುವಿಕೆಯನ್ನು ಮುಟ್ಟುವಾಗ ಕೈಗವಸು ಹಾಕಿಕೊಂಡು ಮುಟ್ಟಬೇಕು ಎಂದು ಮುಖ್ಯ ಪಶು ವೈದ್ಯಾಧಿಕಾರಿ ಮನೋಹರ ಪಿ. ದ್ಯಾಬೇರಿ ತಿಳಿಸಿದ್ದಾರೆ. -ಶಶಿಧರ್ ಬುದ್ನಿ