Advertisement

ನಾಲ್ಕು ದಿನ ಭಾರೀ ಮಳೆ: ಸಿಎಂ ಬೊಮ್ಮಾಯಿ ಮುನ್ಸೂಚನೆ : ಡಿ.ಸಿ.ಗಳ ಜತೆ ಸಭೆ

12:52 AM Jul 09, 2022 | Team Udayavani |

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಮುಂದಿನ 3ರಿಂದ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಗಳು ಕಟ್ಟೆಚ್ಚರದಿಂದ ಇರಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸೂಚಿಸಿದ್ದಾರೆ. ಜೂ. 1ರಿಂದ ಇಲ್ಲಿಯ ವರೆಗೆ ಮಳೆಯಿಂದಾಗಿ ರಾಜ್ಯದಲ್ಲಿ 12 ಮಂದಿ ಅಸುನೀಗಿದ್ದಾರೆ ಮತ್ತು 65 ಜಾನುವಾರುಗಳ ಜೀವಹಾನಿಯಾಗಿದೆ ಎಂದು ತಿಳಿಸಿದ್ದಾರೆ.

Advertisement

ಬೆಂಗಳೂರಿನಲ್ಲಿರುವ ಗೃಹ ಕಚೇರಿ “ಕೃಷ್ಣಾ’ ದಲ್ಲಿ ಮಳೆಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳ ಜತೆಗೆ ವೀಡಿಯೋ ಸಂವಾದ ನಡೆಸಿದ ಅನಂತರ ಅವರು ಮಾತನಾಡಿದರು.

ಮಳೆಹಾನಿ ಪರಿಹಾರ ಕಾರ್ಯಾಚರಣೆಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಒಟ್ಟು 735.59 ಕೋ.ರೂ. ಹಣ ಇದೆ. ಮನೆಗೆ ಹಾನಿಯಾಗಿದ್ದರೆ ತತ್‌ಕ್ಷಣ ತಲಾ 10 ಸಾವಿರ ರೂ. ಪರಿಹಾರ ನೀಡಲು ಸೂಚಿಸಲಾಗಿದೆ. ಮಳೆ ಕಡಿಮೆಯಾದ ಅನಂತರ ನಷ್ಟದ ವರದಿ ಪಡೆದುಕೊಂಡು ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದರು. ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದಿದೆ. ಹೀಗಾಗಿ ಜನ-ಜಾನುವಾರಿಗೆ ತೊಂದರೆ ಆಗಿದೆ. ಈಗಿರುವ ಮಾಹಿತಿಯ ಪ್ರಕಾರ 13 ಜಿಲ್ಲೆಗಳ 17 ತಾಲೂಕುಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದರು.

ಸ್ಥಳಾಂತರಕ್ಕೆ ಆದೇಶ
ಭೂ ಕುಸಿತ ಸಂಭವಿಸಿರುವಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶ ಕೊಟ್ಟಿದ್ದೇನೆ. ರಸ್ತೆಗಳ ಮೇಲೆ ಮಣ್ಣು ಬಿದ್ದಿದೆ, ಅದನ್ನು ಸರಿಪಡಿಸಲು ಆದೇಶ ನೀಡಿದ್ದೇನೆ. ಮನೆ ಹಾನಿಯಾದ ಸಂದರ್ಭದಲ್ಲಿ ತತ್‌
ಕ್ಷಣವೇ 10 ಸಾವಿರ ರೂ. ಪರಿಹಾರ ನೀಡುವಂತೆ ಸೂಚಿಸಿದ್ದು, ಅನಂತರ ಎಷ್ಟು ಪ್ರಮಾಣದಲ್ಲಿ ಹಾನಿ ಆಗಿದೆ ಎಂದು ಜಿ.ಪಂ. ಎಂಜಿನಿಯರ್‌ಗಳ ಮೂಲಕ ವರದಿ ತರಿಸಿಕೊಂಡು ಈ ಹಿಂದೆ ಪರಿಹಾರ ನೀಡಿದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯ ಮತ್ತು ಕೇಂದ್ರದ ವಿಪತ್ತು ನಿರ್ವ ಹಣ ತಂಡಗಳು ಪರಿಸ್ಥಿತಿ ಎದುರಿಸಲು ಸನ್ನದ್ಧ ವಾಗಿವೆ, ಆ ತಂಡಗಳ ಸದುಪಯೋಗಕ್ಕೆ ಸೂಚನೆ ನೀಡಿದ್ದೇನೆ. ರಸ್ತೆಗಳ ಹಾನಿ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವಿದ್ಯುತ್‌ ಸಂಪರ್ಕವನ್ನು ಆದಷ್ಟು ಬೇಗನೆ ಯಥಾಸ್ಥಿತಿಗೆ ತರುವಂತೆ ಆಯಾ ಎಸ್ಕಾಂಗಳಿಗೆ ಆದೇಶಿಸಲಾಗಿದೆ ಎಂದರು.

Advertisement

ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ
ಕರಾವಳಿಯ ಕೆಲವೆಡೆಗಳಲ್ಲಿ ಕಡಲ್ಕೊರೆತ ಸಂಭವಿಸಿದ್ದು, ಎರಡು ರೀತಿಯ ಪರಿಹಾರಕ್ಕೆ ಸೂಚಿಸಿದ್ದೇನೆ. ಕಡಲ್ಕೊರೆತದಿಂದ ಕೆಲವೆಡೆ ರಸ್ತೆಗಳಿಗೂ ಹಾನಿಯಾಗಿದೆ. ಅದನ್ನು ಸರಿಪಡಿಸಲು ತಿಳಿಸಿದ್ದೇನೆ. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪಟ್ಟಿ ಮಾಡಿ, ಬೇರೆ ತಂತ್ರಜ್ಞಾನ ಬಳಸಿ ಈ ಸಮಸ್ಯೆಯ ಪರಿಹಾರಕ್ಕೆ ನಿರ್ಧರಿಸಿದ್ದೇವೆ ಎಂದರು.

ಗ್ರಾಮ ಮಟ್ಟದ ಕಾರ್ಯಪಡೆ
ಮಳೆಹಾನಿ ಪರಿಹಾರ ಕಾರ್ಯಕ್ಕೆ ಗ್ರಾಮ ಮಟ್ಟದ ಕಾರ್ಯಪಡೆ ರಚಿಸಲು ಸೂಚನೆ ಕೊಟ್ಟಿದ್ದೇನೆ. ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಸಹಿತ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯಪಡೆಗೆ ಸಹಕಾರ ನೀಡಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮುಂದಿನ ನಾಲ್ಕು ದಿನ ವ್ಯಾಪಕವಾಗಿ ಮಳೆಯಾಗುವ ಕುರಿತು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ನಿಂತ ಅನಂತರ ನಷ್ಟದ ನಿಖರ ವರದಿ ತರಿಸಿಕೊಳ್ಳಲಾಗುತ್ತದೆ. ಮನೆ, ಬೆಳೆ ಮತ್ತಿತರ ಎಲ್ಲ ವಿಧದ ನಷ್ಟಗಳ ಅಂದಾಜು ಮಾಡಲಾಗುತ್ತದೆ. ಅನಂತರ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸದ್ಯ ಮಹಾರಾಷ್ಟ್ರದ ಕೊಯ್ನಾ ಮತ್ತಿತರ ಜಲಾಶಯಗಳು ಭರ್ತಿಯಾಗಿಲ್ಲ. ರಾಜ್ಯದ ಘಟಪ್ರಭಾ, ಮಲಪ್ರಭಾ, ಹಿಡಕಲ್‌ ಇತ್ಯಾದಿಗಳಲ್ಲಿ ಶೇ. 50ರಷ್ಟು ನೀರು ತುಂಬಿದೆ. ಆದರೂ ನಿಗಾ ಇರಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ ಜಿಲ್ಲಾಧಿಕಾರಿಗಳ ಜತೆಗೆ ಬೆಳಗಾವಿ, ವಿಜಯಪುರ ಜಿಲ್ಲಾಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಅಂತಾರಾಜ್ಯ ಜಲಾಶಯ ಸಮಿತಿ ಇದೆ, ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪರಸ್ಪರ ಸಮನ್ವಯದಿಂದ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಿದ್ದಾರೆ ಎಂದು ಹೇಳಿದರು.

ಪರಿಹಾರಕ್ಕೆ ಹೆಚ್ಚುವರಿ
55 ಕೋ.ರೂ.: ಅಶೋಕ್‌
ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಹಾನಿಗೆ ಪರಿಹಾರ ನೀಡಲು ಹೆಚ್ಚುವರಿಯಾಗಿ 55 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿರುವ ಅವರು, ಪರಿಹಾರ ಕಾರ್ಯಗಳಿಗೆ ಹಣಕಾಸಿನ ಕೊರತೆ ಇಲ್ಲ, ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣದ ಜತೆಗೆ 55 ಕೋ.ರೂ.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಳೆ, ಲಘು ಭೂಕಂಪ, ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದೇನೆ. ಪ್ರವಾಹ ಪರಿಸ್ಥಿತಿ ಉಂಟಾಗಿ ಮಾನವ, ಜಾನುವಾರು ಜೀವಹಾನಿ, ಬೆಳೆ-ಮನೆ ಹಾನಿ ಹಾಗೂ ಸಾರ್ವಜನಿಕ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಗೆ ಹೆಚ್ಚುವರಿಯಾಗಿ 55 ಕೋ.ರೂ. ಬಿಡುಗಡೆ ಮಾಡಿದ್ದೇವೆ. ಇದರಿಂದ ಪರಿಹಾರ ಒದಗಿಸಲು ಅನುಕೂಲ ಆಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next