ಬೆಂಗಳೂರು: ನಗರದಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಅನುಷ್ಠಾನವಾದ ಬೆನ್ನಲ್ಲೇ ಹಸಿಕಸ ವಿಂಗಡಣೆ ಪ್ರಮಾಣಹೆಚ್ಚಳವಾಗಿದೆ. ಪಾಲಿಕೆ ವ್ಯಾಪ್ತಿಯ20 ವಾರ್ಡ್‌ಗಳಲ್ಲಿ ಹಸಿ, ಒಣ ಹಾಗೂ ವೈದ್ಯಕೀಯ ತ್ಯಾಜ್ಯ ಸಂಗ್ರಹ ಮಾಡಲು ಪಾಲಿಕೆ ಯೋಜನೆ ರೂಪಿಸಿದ ಮೇಲೆಕಸ ವಿಂಗಡಣೆ ಪ್ರಮಾಣ ಚೇತರಿಕೆ ಕಂಡಿದೆ.
ಪ್ರತ್ಯೇಕ ಕಸ ಸಂಗ್ರಹ ಯೋಜನೆ ಅನುಷ್ಠಾನಕ್ಕೆ ಹಲವು ತೊಡಕುಗಳು ಸೃಷ್ಟಿಯಾಗಿದ್ದವು. ಈ ಮಧ್ಯೆ ಸೆ.15ಕ್ಕೆ ಪಾಲಿಕೆ ಅಧಿಕೃತವಾಗಿ ಪ್ರತ್ಯೇಕ ಸಕ ಸಂಗ್ರಹಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ ಗೋವಿಂದರಾಜನಗರ ವಾರ್ಡ್, ದೀಪಾಂಜಲಿ ನಗರ ವಾರ್ಡ್, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ ಹಾಗೂ ಮಂಗಮ್ಮನ ಪಾಳ್ಯ ವಾರ್ಡ್ ಸೇರಿದಂತೆ 20 ವಾರ್ಡ್‌ಗಳಲ್ಲಿ ಹಸಿ,ಒಣ ಹಾಗೂ ವೈದ್ಯಕೀಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿದೆ. ಈ ವಾರ್ಡ್‌ಗಳಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದ್ದು, ಇದರಿಂದಾಗಿ ಕಸ ವಿಂಗಡಣೆ ಪ್ರಮಾಣದಲ್ಲಿ ತುಸು ಹೆಚ್ಚಳವಾಗಿದೆ ಎಂದು ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಘನ ತ್ಯಾಜ್ಯ ವಿಭಾಗದ ಮುಖ್ಯ ಎಂಜಿನಿಯರ್ ವಿಶ್ವನಾಥ ಅವರು, ಪ್ರತ್ಯೇಕ ಕಸ ಸಂಗ್ರಹ ಯೋಜನೆಗೆ ಚಾಲನೆ ನೀಡಿ 10 ದಿನಗಳಾಗಿದ್ದು, ಸದ್ಯ ಈ ವಾರ್ಡ್‌ನಲ್ಲಿ ಕಸ ವಿಂಗಡಣೆ ಪ್ರಮಾಣ ಏರಿಕೆಯಾಗಿದೆ. ಗೋವಿಂದರಾಜ ನಗರ ವಾರ್ಡ್‌ನಲ್ಲಿ ಈ ಹಿಂದೆ ಒಂದು ಟನ್ ಸಂಗ್ರಹವಾಗುತ್ತಿದ್ದ ಹಸಿ ಕಸ, ಹೊಸ ಯೋಜನೆ ಬಳಿಕ ನಾಲ್ಕು ಟನ್‌ಗೆ ಹೆಚ್ಚಳವಾಗಿದೆ. ಮಿಶ್ರತ್ಯಾಜ್ಯದ ಪ್ರಮಾಣ 9 ಟನ್ ಸಂಗ್ರಹವಾಗುತ್ತಿತ್ತು. ಇದೀಗ 6.5 ಟನ್‌ಗೆ ಇಳಿದಿದೆ. ಅಲ್ಲದೆ, ಪ್ರತ್ಯೇಕ ತ್ಯಾಜ್ಯ ಸಂಗ್ರಹದಿಂದ ವಾರ್ಡ್‌ಗಳಲ್ಲಿ ಘನತ್ಯಾಜ್ಯ ಸಂಪರ್ಕ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಕಸ ವಿಂಗಡಣೆ, ಮನೆಯಲ್ಲಿಯೇ ಗೊಬ್ಬರ ತಯಾರಿಸುವ ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ದಂಡ ಪ್ರಾರಂಭ : ಕಸ ವಿಂಗಡಣೆ ಮಾಡದೆ ನಿಯಮ ಉಲ್ಲಂಘಿಸುವರರ ವಿರುದ್ಧ ಮೊದಲ ಬಾರಿ ಸಾವಿರ ರೂ. ದಂಡ ವಿಧಿಸುವುದಕ್ಕೆ ಪಾಲಿಕೆ ಅಧಿಕೃತವಾಗಿ ಪ್ರಾರಂಭಿಸಿದೆ. ಪಾಲಿಕೆಯ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಇಲ್ಲಿಯವರೆಗೆ ಸಾವಿರ ರೂ. ದಂಡ ವಿಧಿಸುವ ಎಚ್ಚರಿಕೆ ನೀಡುತ್ತಿದ್ದರು. ಇದೀಗ ನಗರದಲ್ಲಿ ಪ್ರತ್ಯೇಕ ಹಸಿಕಸ ಯೋಜನೆ ಅನುಷ್ಠಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಎಚ್‌ಎಸ್‌ಆರ್ ಬಡವಾಣೆ ಸೇರಿದಂತೆ ನಗರದ ವಿವಿಧೆಡೆ ಕಸ ವಿಂಗಡಣೆ ಮಾಡದೆ ನಿರ್ಲಕ್ಷ್ಯ ವಹಿಸಿದ ಸಾರ್ವಜನಿಕರಿಗೆ ತಲಾ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಘನ ತ್ಯಾಜ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಬೈರಸಂದ್ರವಾರ್ಡ್‌ನಲ್ಲಿ ಹೊಸ ಯೋಜನೆ : ದಕ್ಷಿಣವಲಯದ ಬೈರಸಂದ್ರವಾರ್ಡ್‌ನಲ್ಲಿ ಪ್ರತ್ಯೇಕಕಸ ಸಂಗ್ರಹ ಯೋಜನೆಗೆ ಶುಕ್ರವಾರ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಚಾಲನೆ ನೀಡಿದರು. ಈ ವೇಳೆಕಸ ವಿಂಗಡಣೆ, ವಿಲೇವಾರಿ ನಿಯಮ ಹಾಗೂ ಹೊಸ ಯೋಜನೆ ಕುರಿತು ಪೌರಕಾರ್ಮಿಕರು, ಘನತ್ಯಾಜ್ಯ ಸಂಪರ್ಕ ಕಾರ್ಯಕರ್ತರು ಸೇರಿದಂತೆಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿವರಿಸಿದರು. ಈ ವೇಳೆ ಘನ ತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ಖಾನ್, ದಕ್ಷಿಣವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ಹಾಗೂ ಮುಖ್ಯ ಎಂಜಿನಿಯರ್ ವಿಶ್ವನಾಥ ಇತರರಿದ್ದರು.
ಮಾರ್ಷಲ್‌ಗಳಿಂದ ನಿರ್ದಾಕ್ಷಿಣ್ಯಕ್ರಮ : ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಕಸ ವಿಂಗಡಣೆ ಮಾಡದೆ ಕೊಡುವವರ ಮೇಲೆ ಪಾಲಿಕೆಯ ಮಾರ್ಷಲ್‌ಗಳು ಹಾಗೂ ಆರೋಗ್ಯಾಧಿಕಾರಿಗಳ ದಂಡ ಪ್ರಯೋಗ ಮುಂದುವರಿದಿದೆ. ಶಾಂತಿ ನಗರದ ಎಚ್‌ಡಿಎಫ್ಸಿ ಬ್ಯಾಂಕ್ ಸಿಬ್ಬಂದಿ ಕಸವಿಂಗಡಣೆ ಮಾಡದೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯಲು ಮುಂದಾಗಿದ್ದು, ಈ ವೇಳೆ ಮಾರ್ಷಲ್‌ಗಳು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಇದೇ ರೀತಿ ನಿಯಮ ಉಲ್ಲಂಘನೆ ಮಾಡಿದರೆ, ಕಠಿಣ ಕಾನೂನು ಕ್ರಮದ ಜಾರಿ ಎಚರಿಕ್ಚಕೆ ನೀಡಿದ್ದಾರೆ.