ನೆಲಮಂಗಲ: ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಮಟ್ಟಕ್ಕೆ ಚೆಕ್ ಡ್ಯಾಮ್‌ಗಳು ಮರುಜೀವ ನೀಡಿದ್ದು, ನಿರುಪಯುಕ್ತವಾಗಿ ಹರಿದು ಹೋಗುತ್ತಿದ ಮಳೆ ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಮಲ್ಟಿ ಆರ್ಚ್ ಚೆಕ್ ಡ್ಯಾಮ್ ನೂರಾರು ರೈತರ ಜೀವನದ ದಿಕ್ಕು ಬದಲಿಸಿದ್ದು, ಬತ್ತಿಹೋಗಿದ್ದ ಕುಮುದ್ವತಿ ಹಾಗೂ ಕೊಳವೆ ಬಾವಿಗಳಲ್ಲಿ ಗಂಗೆಯ ದರ್ಶನವಾಗಿದೆ.
ಒಂದು ಕಾಲದಲ್ಲಿ ಬೆಂಗಳೂರಿಗೆ ಜೀವನದಿಯಾಗಿದ್ದ ಅರ್ಕಾವತಿಯ ಉಪನದಿ ಕುಮುದ್ವತಿ ದಕ್ಷಿಣಕಾಶಿ ಶಿವಗಂಗೆಯಲ್ಲಿ ಹುಟ್ಟಿ ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತಿದ್ದಳು. ಆದರೆ ಕೆಲ ವರ್ಷಗಳಿಂದ ಬತ್ತಿ ಹೊಗಿದ್ದ ನದಿಗೆ ಚೆಕ್ ಡ್ಯಾಮ್‌ಗಳು ಜೀವ ನೀಡಿದ್ದು ಅಂತರ್ಜಲ ಮಟ್ಟ ಚೇತರಿಸಿಕೊಂಡಿದೆ. ಸರ್ಕಾರದ ಅನುದಾನದಲ್ಲಿ ಕುಮುದ್ವತಿ ಉಪ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚೆಕ್‌ಡ್ಯಾಮ್‌ಗಳು ಆರೇಳು ತಿಂಗಳು ನೀರಿನ ಬವಣೆಯನ್ನು ತಪ್ಪಿಸುತ್ತಿದೆ.
ತಾಲೂಕಿನ ಶ್ರೀನಿವಾಸಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ತೊರೆಮೂಡಲಪಾಳ್ಯದ ಸಮೀಪ ನಿರ್ಮಿಸಿರುವ ಚೆಕ್‌ಡ್ಯಾಮ್‌ಗಳಲ್ಲಿ ಹತ್ತು ಅಡಿಗೂ ಹೆಚ್ಚು ನೀರಿನ ಸಂಗ್ರಹಣೆಯಾಗಿದ್ದು, ತೊರೆಪಾಳ್ಯ, ಹೊಸಪಾಳ್ಯ, ತೊರೆಮೂಡಲಪಾಳ್ಯ, ಹನುಮಂತೆಗೌಡನಪಾಳ್ಯ, ಬೈರಸಂದ್ರ, ಯಲಚಗೆರೆ, ಕೆಂಚನಹಳ್ಳಿ ಸೇರಿದಂತೆ ಅನೇಕ ಗ್ರಾಮದ ರೈತರ ವ್ಯವಸಾಯಕ್ಕೆ ಅನುಕೂಲವಾವೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರಿನ ಸಂಗ್ರಹಣೆಯ ಸಾಮರ್ಥ್ಯ ಹೆಚ್ಚಾಗಿದೆ.
55 ಚೆಕ್‌ಡ್ಯಾಮ್: ಮಳೆಯ ನೀರು ಹರಿದು ಹೋಗುವುದನ್ನು ತಡೆದು ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲವಾಗಲು ಸರಕಾರ ಚೆಕ್‌ಡ್ಯಾಮ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಅದರ ಅನುಕೂಲತೆಯನ್ನು ತಿಳಿದು ತಾಲೂಕಿನಲ್ಲಿ ಈಗಾಗಲೇ 15 ಚೆಕ್‌ಡ್ಯಾಮ್ ಪೂರ್ಣವಾಗಿದ್ದು, 40 ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಹೆಚ್ಚಲಿದೆ.
ಲಾಭ ಪಡೆದ ಗ್ರಾ.ಪಂ: ಶಿವಗಂಗೆಯಿಂದ ಹರಿಯುವ ಕುಮುದ್ವತಿಯು ಅನೇಕ ಗ್ರಾಮಗಳಲ್ಲಿ ಹಾದು ಹೋದರೂ ನೀರಿನ ಬಳಕೆಯನ್ನು ಮಾಡಿಕೊಳ್ಳುವಲ್ಲಿ ಶ್ರೀನಿವಾಸಪುರ ಗ್ರಾ.ಪಂ ಯಶಸ್ವಿಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಪ್ರಮುಖ 8 ಚೆಕ್‌ಡ್ಯಾಮ್ ನಿರ್ಮಿಸಿದ್ದು, ಅನೇಕ ಗ್ರಾಮಗಳಲ್ಲಿ ಸಣ್ಣಸಣ್ಣ ಹಳ್ಳಗಳಿಗೆ ಅಡ್ಡಲಾಗಿ ಅನೇಕ ಚೆಕ್ ಡ್ಯಾಮ್ ನಿರ್ಮಿಸಿ ರೈತರಿಗೆ ಅನುಕೂಲ ಮಾಡುವ ಜೊತೆ ಅಂತರ್ಜಲ ಉಳಿಸುವ ಮೂಲಕ ಹರಿದು ಹೋಗುವ ನೀರಿನ ಲಾಭವನ್ನು ಪಡೆಯಲಾಗಿದೆ.
ಕುಮುದ್ವತಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಮ್‌ನಿಂದ ಸುತ್ತುಮುತ್ತಲ ರೈತರಿಗೆ ಬಹಳಷ್ಟು ಅನುಕೂಲವಾಗಿದ್ದು, ವರ್ಷಪೂರ್ತಿ ಬೆಳೆ ಬೆಳೆಯಲು ಸಹಕಾರಿಯಾಗಿದೆ. ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
-ಮುದ್ದಗಂಗಯ್ಯ, ಹೊಸಪಾಳ್ಯದ ಗ್ರಾಮದ ರೈತ
ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಚೆಕ್‌ಡ್ಯಾಮ್‌ನಿಂದ ಬಹಳಷ್ಟು ಅನುಕೂಲವಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಾಗುತ್ತಿರುವುದರಿಂದ ಪ್ರತಿ ಗ್ರಾಮದಲ್ಲಿಯೂ ಚೆಕ್‌ಡ್ಯಾಮ್ ನಿರ್ಮಾಣ ಮಾಡಲು ಮುಂದಾಗಿದ್ದೇವೆ.
-ದಿವಾಕರಯ್ಯ ಶ್ರೀನಿವಾಸಪುರ ಗ್ರಾ.ಪಂ ಪಿಡಿಓ
* ಕೊಟ್ರೇಶ್.ಆರ್