Advertisement

Karkala: ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಕೆಗೂ ರಾಜ್ಯ ಸರಕಾರದ ಬಳಿ ಹಣವಿಲ್ಲ: ಸುನಿಲ್

09:26 PM Nov 03, 2024 | Team Udayavani |

ಕಾರ್ಕಳ: ವಿಧಾನಸಭಾ ಕ್ಷೇತ್ರದ ಸುಮಾರು 250 ಕಿಂಡಿ ಅಣೆಕಟ್ಟುಗಳು ಸೇರಿ ಉಡುಪಿ ಜಿಲ್ಲೆಯ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಅನುದಾನ ನೀಡಲು ರಾಜ್ಯ ಕಾಂಗ್ರೆಸ್‌ ಸರಕಾರದ ಬಳಿ ಹಣವಿಲ್ಲ. ಕೃಷಿಕರಿಗೆ ಸರಕಾರ ದ್ರೋಹ ಬಗೆಯುವ ಮೂಲಕ ರೈತರ ಬೆನ್ನಿಗೆ ಚೂರಿ ಇರಿದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳ ಅಳವಡಿಸಲು ರಾಜ್ಯ ಸರಕಾರದಿಂದ ಈ ವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದಿರುವ ಅವರು ಸಣ್ಣ ನೀರಾವರಿ ಇಲಾಖೆಯ ಸಚಿವರು ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಗ್ರಹಿಸಿದ್ದರು. ಈ ವರೆಗೆ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದಿರುವ ಅವರು ಸಕಾಲದಲ್ಲಿ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನೀರಿನ ಮೂಲಗಳಿಗೆ ಪ್ರಮುಖ ಆಸರೆ: 
ಕ್ಷೇತ್ರದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳಿದ್ದು, ಅವುಗಳನ್ನು ಸಣ್ಣ ನೀರಾವರಿ ಇಲಾಖೆ ಮುಖಾಂತರ ನಿರ್ವಹಿಸಲಾಗುತ್ತಿದೆ. ನದಿಗಳಿಗೆ ಪೂರಕವಾಗಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲಾಗಿದ್ದು, ಪ್ರತಿ ವರ್ಷ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹವಾಗುವ ನೀರಿನ ಮುಖಾಂತರ ಅಲ್ಲಿನ ಅಚ್ಚುಕಟ್ಟು ಪ್ರದೇಶದ ರೈತರು ಋತುಕಾಲಿಕ ಹಾಗೂ ದೀರ್ಘಕಾಲೀನ ಕೃಷಿ ಬೆಳೆಗಳಿಗೆ ನೀರನ್ನು ಒದಗಿಸುವ ಜತೆಗೆ ಆ ಪರಿಸರದ ಇತರ ನೀರಿನ ಮೂಲಗಳಿಗೆ ಪ್ರಮುಖ ಆಸರೆಯಾಗಿದೆ. ಸದರಿ ಕಿಂಡಿ ಅಣೆಕಟ್ಟುಗಳ ಅಚ್ಚುಕಟ್ಟು ಪ್ರದೇಶದ ಕೃಷಿಕರು ಬಹಳ ದೊಡ್ಡ ಪ್ರಮಾಣದಲ್ಲಿ ಕಿಂಡಿ ಅಣೆಕಟ್ಟಿನ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂದರು.

ಸೂಕ್ತ ಅನುದಾನ ಬಿಡುಗಡೆಗೆ ಆಗ್ರಹ: 
ಪ್ರಸ್ತುತ ಮಳೆಗಾಲ ಮುಗಿದಿದ್ದು, ನೀರಿನ ಹರಿವು ಕಡಿಮೆ ಆಗುತ್ತಿದ್ದು, ತಕ್ಷಣದಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆಗಳ ಅಳವಡಿಸದಿದ್ದಲ್ಲಿ, ಸಂಗ್ರಹವಾಗುವ ನೀರಿನ ಪ್ರಮಾಣ ಕಡಿಮೆಯಾಗಿ ಮುಂದಿನ ದಿನಗಳಲ್ಲಿ, ಬೇಸಿಗೆ ಸಂದರ್ಭದಲ್ಲಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ನೀರಿನ ಕೊರತೆ ಉಂಟಾಗುವ ಸಂಭವವಿದೆ. ಅನುದಾನದ ಕೊರತೆಯಿಂದಾಗಿ ಕಿಂಡಿ ಅಣೆಕಟ್ಟುಗಳಿಗೆ ಸೂಕ್ತ ಸಮಯದಲ್ಲಿ ಹಲಗೆಗಳ ಅಳವಡಿಸದಿದ್ದಲ್ಲಿ, ಸ್ಥಳೀಯ ರೈತರೇ ಮುಂದಿನ ದಿನಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಪರ್ಯಾಯ ಮಾರ್ಗೋಪಾಯಗಳ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಬರಬಹುದು ಆದ್ದರಿಂದ ಕಾರ್ಕಳ ಕ್ಷೇತ್ರ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲಾ ಕಿಂಡಿ ಅಣೆಕಟ್ಟುಗಳಿಗೆ ಆದಷ್ಟು ಶೀಘ್ರವಾಗಿ ಹಲಗೆಗಳ ಅಳವಡಿಸಲು ಸೂಕ್ತ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ  ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next