Advertisement
ನಗರದ ಫ್ರಿಡಂ ಪಾರ್ಕ್‌ನಲ್ಲಿ ರೆಡ್ ರಿಬ್ಬನ್ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ಬೃಹತ್ ಸಸ್ಯಹಾರಿ ಆಹಾರ ಸಂತೆ ನ.26ರವರೆಗೆ ನಡೆಯಲಿದೆ. ಸಂತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ತಿನಿಸುಗಳು ಸೇರಿದಂತೆ, ದೇಶದ ವಿವಿಧರಾಜ್ಯಗಳ ಹಾಗೂ ವಿದೇಶಗಳ ತಿಂಡಿ-ತಿನಿಸುಗಳು ಆಹಾರ ಪ್ರಿಯರಿಗೆ ಮತ್ತಷ್ಟು ರುಚಿ ನೀಡಲಿವೆ. ಆಹಾರ ಸಂತೆಯಲ್ಲಿ 100ಕ್ಕೂ ಅಧಿಕ ಮಳಿಗೆಗಳಿದ್ದು, ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ-ತಿನಿಸುಗಳು ಸಾರ್ವಜನಿಕರಿಗೆ ದೊರೆಯಲಿವೆ. ಗ್ರಾಮೀಣ, ಸಾಂಪ್ರದಾಯಿಕ, ಪಾಶ್ಚಾತ್ಯ, ಸಿರಿಧ್ಯಾನದಿಂದ ತಯಾರಿಸಿದ, ಅಕ್ಕಿ, ರಾಗಿ, ಜೋಳದ ರೊಟ್ಟಿ, ಪಿಜ್ಜಾ, ಐಸ್‌ಕ್ರೀಂ ಹೀಗೆ
ಹಲವು ಬಗೆಯ ತಿನಿಸುಗಳನ್ನು ಸಂತೆಯ ವೈಶಿಷ್ಟತೆಯನ್ನು ಹೆಚ್ಚಿಸಿದ್ದು, ರಾಜಧಾನಿಯ ಕೆಲವೊಂದು ಹೆಸರಾಂತ ಹೋಟೆಲ್‌ಗಳು ಸಹ ಸಂತೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.
ಮಳಿಗೆಗಳಲ್ಲಿ 30ಕ್ಕೂ ಹೆಚ್ಚು ಬಗೆಯ ಕಾಫಿ, ಹತ್ತಾರು ಬಗೆಯ ಐಸ್‌ಕ್ರೀಂ, ಚಾಕೋಲೆಟ್, ಪಾನಿಪೂರಿ, ಹೋಳಿಗೆ, ಮಡಿಕೆ ರೈಸ್ ಬಿರಿಯಾನಿ, ಮಲೆನಾಡಿನ ಕಶಾಯ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೀಗೆ ಹತ್ತು ಹಲವು ಬಗೆಯ ತಿನಿಸುಗಳು ನಾಲಿಗೆಗೆ ರುಚಿ ನೀಡುತ್ತವೆ. ಜ್ಯೂಸ್ ಮೇಲೆ ನಿಮ್ಮ ಫೋಟೊ!
ಬೆಂಗಳೂರಿನ ಕೋರಮಂಗಲದ ಸೆಲ್ಫಿ ಕೆಫೆ ಮಳಿಗೆಯು ಸಂತೆಗೆ ಬರುವ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಮಳಿಗೆಯ ಮುಂದಿರುವ ಕ್ಯಾಮೆರಾ ಮುಂದೆ ನಿಂತು ಗ್ರಾಹಕರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಕೇವಲ 30 ಸೆಕೆಂಡ್‌ನಲ್ಲಿ ತಾವು ಬಯಸುವ ಜ್ಯೂಸ್ ಮೇಲೆ ಆ ಫೋಟೋ ಪದರ ಬರಲಿವೆ. ಇದು ಹಾಂಕಾಂಗ್ ಮೂಲದ ತಂತ್ರಜ್ಞಾನವಾಗಿದ್ದು, ಹಣ್ಣುಗಳಿಂದ ತಯಾರಿಸಿದ ಕ್ರೀಮ್‌ನಿಂದ ಈ ರೀತಿಯ ಫೋಟೋ ಮುದ್ರಣವಾಗಲಿದ್ದು, ಜತೆಗೆ ಆ ಪದರ ತಿನ್ನಲು ಸಹ ಯೋಗ್ಯವಾಗಿದೆ ಎಂದು ಮಳಿಗೆದಾರರು ತಿಳಿಸಿದ್ದಾರೆ.
Related Articles
ಆಹಾರ ಸಂತೆಯಲ್ಲಿ ಭಾಗಿಯಾಗಲು ಪ್ರತಿ ವ್ಯಕ್ತಿಗೆ 50 ರೂ. ಪ್ರವೇಶ ಶುಲ್ಕ ನಿಗದಿಪಡಿಸಿರುವುದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಇಂತಹ ಸಂತೆಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಆದರೆ, ಫ್ರಿಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಸಂತೆ ಪ್ರವೇಶಕ್ಕೆ ಪ್ರತಿ ವ್ಯಕ್ತಿಗೆ 50 ರೂ. ನಿಗದಿಪಡಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement