Advertisement
ಹೌದು, ಎರಡೂ ಪಂದ್ಯಗಳಲ್ಲಿ ಭಾರತಕ್ಕೆ ಶಾಪವಾಗಿದ್ದು ಕೊಹ್ಲಿ ‘ಇಬ್ಬನಿ’ ನಿರ್ಧಾರ.(DEW FACTOR) ಮೈದಾನದಲ್ಲಿ ಇಬ್ಬನಿ ಬೀಳುವ ಬಗ್ಗೆ ಕೊಹ್ಲಿಯ ತಪ್ಪು ತಿಳುವಳಿಕೆ ಎರಡೂ ಪಂದ್ಯದಲ್ಲಿ ಭಾರತ ಗೆಲ್ಲಬಹುದಾದ ಪಂದ್ಯವನ್ನು ಸೋಲುವಂತೆ ಮಾಡಿತ್ತು.
ರಾಂಚಿ ಪಂದ್ಯ: ಮಾರ್ಚ್ ಎಂಟರಂದು ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತೀಯ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ‘ರಾಂಚಿ ಅಂಗಳದಲ್ಲಿ ರಾತ್ರಿ ಇಬ್ಬನಿ ಬೀಳುತ್ತದೆ. ಹಾಗಾಗಿ ನಮಗೆ ಗುರಿ ಬೆನ್ನಟ್ಟಲು ಸುಲಭವಾಗುತ್ತದೆ’ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅಲ್ಲಿ ಆದದ್ದೇ ಬೇರೆ ! ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, ಉಸ್ಮಾನ್ ಖ್ವಾಜಾರ ಶತಕದ ನೆರವಿನಿಂದ 313 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ಅದೇ ‘ಇಬ್ಬನಿ’ ಕೈಕೊಟ್ಟಿತು. ಕೊಹ್ಲಿ ಎಣಿಸಿದಂತೆ ಅಂಗಳದಲ್ಲಿ ಇಬ್ಬನಿ ಬೀಳಲೇ ಇಲ್ಲ. ಆಸೀಸ್ ಬೌಲರ್ ಗಳು ಉತ್ತಮ ಬೌಲಿಂಗ್ ಮಾಡಿದರು. ಭಾರತ ರನ್ ಕಲೆ ಹಾಕಲು ಹೆಣಗಾಡಿತು. ಕೊಹ್ಲಿ ಶತಕ ಬಾರಿಸಿದರೂ ತಂಡ 281 ರನ್ ಗೆ ಆಲ್ ಔಟ್ ಆಯಿತು. ಅಸೀಸ್ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತ್ತು.
ಮೊಹಾಲಿ ಪಂದ್ಯ: ಸರಣಿಯ ನಾಲ್ಕನೇ ಪಂದ್ಯ ನಡೆದಿದ್ದು ಮೊಹಾಲಿಯಲ್ಲಿ. ಇದೂ ಕೂಡಾ ಹೈ ಸ್ಕೋರಿಂಗ್ ಮ್ಯಾಚ್. ಇಲ್ಲೂ ಕೂಡಾ ಕೊಹ್ಲಿಯೇ ಟಾಸ್ ಗೆದ್ದಿದ್ದರು. ‘ಮೊಹಾಲಿಯಲ್ಲಿ ರಾತ್ರಿ ವೇಳೆ ಇಬ್ಬನಿ ಬೀಳುವುದಿಲ್ಲ’ ಎನ್ನುವ ಕಾರಣಕ್ಕೆ ಕೊಹ್ಲಿ ಈ ಬಾರಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಶಿಖರ್ ಧವನ್ ಭರ್ಜರಿ ಶತಕ, ರೋಹಿತ್ ಶರ್ಮಾರ ಉತ್ತಮ ಇನ್ನಿಂಗ್ಸ್ ಸಹಾಯದಿಂದ ಭಾರತ 358 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಬೌಲಿಂಗ್ ವೇಳೆ ಹೇಗೂ ಇಬ್ಬನಿ ಬೀಳುವುದಿಲ್ಲ ಹಾಗಾಗಿ ಪಂದ್ಯ ನಮ್ಮದೇ ಎಂದು ಬೀಗಿದ್ದ ಕೊಹ್ಲಿಯ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದ್ದು ಮತ್ತದೇ ‘ಇಬ್ಬನಿ’.
Related Articles
Advertisement
ಏನಿದು ಇಬ್ಬನಿ ಮಹಾತ್ಮೆ !ಇಬ್ಬನಿ ಅಥವಾ dew factor ಹಗಲು-ರಾತ್ರಿ ಕ್ರಿಕೆಟ್ ಪಂದ್ಯಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಾತ್ರಿಯ ಆಟದ ವೇಳೆ ಅಂದರೆ ರಾತ್ರಿ ಸುಮಾರು 8 ಗಂಟೆಯ ನಂತರ ಬೀಳುವ ಇಬ್ಬನಿ, ಬ್ಯಾಟಿಂಗ್ ನಡೆಸುವ ತಂಡಕ್ಕೆ ವರವಾದರೆ ಫೀಲ್ಡಿಂಗ್ ನಡೆಸುವ ತಂಡಕ್ಕೆ ಕಷ್ಟವಾಗುತ್ತದೆ.
ಇಬ್ಬನಿ ಬೀಳುವುದರಿಂದ ಮೈದಾನದಲ್ಲಿರುವ ಹುಲ್ಲು ಒದ್ದೆಯಾಗಿರುತ್ತದೆ. ಹುಲ್ಲಿನ ಮೇಲೆ ಬಿದ್ದ ಚೆಂಡು ಕೂಡಾ ಒದ್ದೆಯಾಗುತ್ತದೆ. ಹೀಗಾದಾಗ ಬೌಲರ್ ಗಳಿಗೆ ಎದುರಾಳಿ ಬ್ಯಾಟ್ಸ್ ಮನ್ ನ ಮೇಲೆ ನಿಯಂತ್ರಣ ಬಿಡಿ ತನ್ನ ಕೈಯಲ್ಲಿರುವ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟವಾಗುತ್ತದೆ. ಚೆಂಡು ಒದ್ದೆಯಾಗುವುದರಿಂದ ಸ್ಪಿನ್ನರ್ ಗಳಿಗೆ ಅಂಗೈಯಲ್ಲಿ ಚೆಂಡನ್ನು ಗಟ್ಟಿಯಾಗಿ ಹಿಡಿದು ಚೆಂಡು ತಿರುಗಿಸಲು ಸಾಧ್ಯವಾಗುವುದಿಲ್ಲ. ಕಾರಣ ಚೆಂಡು ಕೈಯಲ್ಲಿ ಜಾರುತ್ತದೆ. ಅದಕ್ಕೆ ಫೀಲ್ಡರ್ ಗಳು ತಮ್ಮ ಕರವಸ್ತ್ರ ದಿಂದ ಚೆಂಡನ್ನು ಉಜ್ಜಿ ಬೌಲರ್ ಗೆ ನೀಡುತ್ತಾರೆ. ವೇಗದ ಬೌಲರ್ ಗಳು ನಿಖರವಾಗಿ ಲೈನ್ ಲೆಂತ್ ನಲ್ಲಿ ಬಾಲ್ ಹಾಕಲು ಕಷ್ಟಪಡುತ್ತಾರೆ. ಚೆಂಡು ಒದ್ದೆಯಾಗಿರುವುದರಿದ ಎಲ್ಲಿ ಬೇಕೋ ಅಲ್ಲಿ ಚೆಂಡನ್ನು ಪಿಚ್ ಮಾಡಲು ವೇಗಿಗಳು ಪರದಾಡುತ್ತಾರೆ. ಸತತ ಯಾರ್ಕರ್ ಗಳನ್ನು ಎಸೆಯುವ ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ ಎಸೆದ ಯಾರ್ಕರ್ ಗಳು ಫುಲ್ ಟಾಸ್ ಆಗಿ ಬ್ಯಾಟ್ಸ್ ಮನ್ ಗಳಿಗೆ ವರವಾಗುವುದನ್ನು ನಾವು ಇಲ್ಲಿ ಗಮನಿಸಬಹುದು.
ಅದೇ ರೀತಿ ಕ್ಷೇತ್ರ ರಕ್ಷಣೆಯಲ್ಲೂ ಇಬ್ಬನಿ ಪ್ರಭಾವ ಬೀಳುತ್ತದೆ. ಒದ್ದೆ ಮೈದಾನದಿಂದಾಗಿ ಫೀಲ್ಡರ್ ಗಳು ಬೀಳುವ ಭಯದಿಂದ ವೇಗವಾಗಿ ಓಡಲು ಹಿಂಜರೆಯುತ್ತಾರೆ. ಮತ್ತೊಂದು ವಿಚಾರವೆಂದರೆ ಒದ್ದೆ ಮೈದಾನದಲ್ಲಿ ಚೆಂಡು ವೇಗವಾಗಿ ಚಲಿಸುವುದರಿಂದ ಬ್ಯಾಟ್ಸ್ ಮನ್ ಗಳಿಗೆ ಸುಲಭವಾಗಿ ರನ್ ಕಲೆ ಹಾಕಲು ಸಾಧ್ಯವಾಗುತ್ತದೆ. ಕೀರ್ತನ್ ಶೆಟ್ಟಿ ಬೋಳ