Advertisement

ಮಲ್ಲಿಕಾರ್ಜುನ ಖರ್ಗೆ CM ಆಗುವುದಾದರೆ ತ್ಯಾಗಕ್ಕೆ ಸಿದ್ಧ- ಡಿ.ಕೆ.ಶಿವಕುಮಾರ್‌ ಹೊಸ ದಾಳ

08:55 PM Apr 08, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಅತೃಪ್ತಿ, ಅಸಮಾಧಾನ ಸ್ಫೋಟಗೊಂಡಿರುವಂತೆಯೇ ಶನಿವಾರ ಹೊಸ ಬೆಳವಣಿಗೆಯೊಂದು ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿಯಾದರೆ ಅವರ ಕೈ ಕೆಳಗೆ ಕೆಲಸ ಮಾಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೊಸ “ಬಾಂಬ್‌” ಸಿಡಿಸಿದ್ದಾರೆ.

Advertisement

ನವದೆಹಲಿಯಿಂದ ಹಿಂತಿರುಗಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಅವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಚೆಕ್‌ವೆುಟ್‌ ನೀಡಲೆಂದೇ ಈ ಹೇಳಿಕೆ ಕೊಟ್ಟಿದ್ದಾರೆ ಎಂಬ ವ್ಯಾಖ್ಯಾನಿಸಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಇದ್ದಕ್ಕಿದ್ದಂತೆ ತೇಲಿ ಬಿಟ್ಟಿರುವ ಹಿಂದೆ ನಾನಾ ರಾಜಕೀಯ ಲೆಕ್ಕಾಚಾರಗಳೂ ಇವೆ ಎಂದು ಹೇಳಲಾಗುತ್ತಿದೆ.

ಡಿಕೆಶಿ ಹೇಳಿದ್ದೇನು?
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, “ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ನಾಯಕರು, ಅವರೇ ನನ್ನ ಅಧ್ಯಕ್ಷರು. ಖರ್ಗೆ ಅವರು ನನಗಿಂತ 20 ವರ್ಷಗಳ ಹಿರಿಯರು. ಅವರ ಹಿರಿತನ, ತ್ಯಾಗಕ್ಕೆ ನಾವು ಗೌರವ ನೀಡಬೇಕು. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ ಅವರ ಜತೆ ಕೆಲಸ ಮಾಡಲು ಸಿದ್ಧನಿದ್ದೇನ”‘ ಎಂದು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯ ಹಾಗೂ ದೇಶಕ್ಕೆ ಆಸ್ತಿ. ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ನಾನು ಅದಕ್ಕೆ ಬದ್ಧವಾಗಿರುತ್ತೇನೆ. ಅವರು ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದಾರೆ. ಮಧ್ಯರಾತ್ರಿ ತಮ್ಮ ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಾಕ್‌ ಅಧ್ಯಕ್ಷರು ಎಐಸಿಸಿ ಅಧ್ಯಕ್ಷರಾಗಿದ್ದು ಇದು ಕಾಂಗ್ರೆಸ್‌ನಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

1972ರಲ್ಲೇ ಅವರು ಪ್ರವೇಶಿಸಿದರೆ, ನಾನು 1985ರಲ್ಲಿ ರಾಜಕೀಯಕ್ಕೆ ಬಂದವನು. ಅವರು ಏನು ಬಯಸಿದರೂ ಅದೆಲ್ಲವನ್ನೂ ನೀಡುತ್ತೇವೆ. ಅವರ ಇಚ್ಛೆ ಈಡೇರಿಕೆಗೆ ನಾನು ಬದ್ಧ ಎಂದು ತಿಳಿಸಿದ್ದಾರೆ.

Advertisement

ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದರೆ ಯಾರೂ ವಿರೋಧಿಸಲು ಆಗುವುದಿಲ್ಲ. ಹಿಂದೆಯೇ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಕೂಗು ಇತ್ತು. ಖರ್ಗೆ ಹಾಗೂ ಡಾ.ಜಿ.ಪರಮೇಶ್ವರ್‌ಗೆ ಮುಖ್ಯಮಂತ್ರಿ ಹುದ್ದೆ ತಪ್ಪಿತು ಎಂಬ ಭಾವನೆಯೂ ದಲಿತ ಸಮುದಾಯದಲ್ಲಿದೆ. ಆದರೆ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ, ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.
ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯಿಂದ ದಲಿತ ಸಮುದಾಯದ ಮತಬ್ಯಾಂಕ್‌ ಸೆಳೆಯುವ ಕಾರ್ಯತಂತ್ರ ಇರಬಹುದಾದರೂ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಆಗಲು ಬಿಡುವುದಿಲ್ಲ ಎಂಬ ಪರೋಕ್ಷ ಸಂದೇಶ ಕುರುಬ ಸಮುದಾಯ ಸೇರಿ ಹಿಂದುಳಿದ ವರ್ಗಗಳಿಗೆ ರವಾನೆಯಾದರೆ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬ ಆತಂಕವೂ ಮುಖಂಡರನ್ನು ಕಾಡುತ್ತಿದೆ.

ಇತ್ತೀಚೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಂದರ್ಶನವೊಂದರಲ್ಲಿ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಆಗಲ್ಲ ಎಂದು ಹೇಳಿದ್ದರು ಎಂಬರ್ಥದಲ್ಲಿ ಸುದ್ದಿಗಳು ಪ್ರಸಾರವಾಗಿದ್ದವು. ಆಗ, ದೆಹಲಿಯಲ್ಲೇ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಾನು ಹಾಗೆ ಹೇಳಿರಲಿಲ್ಲ. ಇಬ್ಬರೂ ಆಕಾಂಕ್ಷಿಗಳು, ಚುನಾವಣೆ ನಂತರ ಶಾಸಕರು ಹಾಗೂ ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದ್ದರು.

ಇದಾದ ನಂತರ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ವಿಚಾರದಲ್ಲಿ ಆಂತರಿಕವಾಗಿ ಸಂಘರ್ಷ ಮುಂದುವರಿದಿದೆ ಎಂಬ ಮಾತುಗಳೂ ಕೇಳಿಬರುತ್ತಿದ್ದವು. ಇದೀಗ ದಿಢೀರ್‌ ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿಯೇ ಹೇಳಿರುವುದು ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕಾದು ನೋಡಬೇಕಾಗಿದೆ.

ಏ.16ಕ್ಕೆ ರಾಹುಲ್‌ ಸತ್ಯಾಗ್ರಹ ಕಾರ್ಯಕ್ರಮ
ಕೋಲಾರದಲ್ಲಿ ಜೈ ಭಾರತ ಸತ್ಯಾಗ್ರಹ ಯಾತ್ರೆ ಏ.10ರಂದು ಹಮ್ಮಿಕೊಳ್ಳಲು ನಿರ್ಧರಿಸಿದ್ದೆವು. ಈ ಮೊದಲು ಏಪ್ರಿಲ್‌ 9ರಂದು ಸತ್ಯಾಗ್ರಹ ಯಾತ್ರೆ ನಡೆಸಲು ಉದ್ದೇಶಿಸಲಾಗಿತ್ತು. ಆಯ್ಕೆ ಪ್ರಕ್ರಿಯೆ, ಪಕ್ಷದಲ್ಲಿ ಟಿಕೆಟ್‌ ವಂಚಿತರ ಬಂಡಾಯ, ವಿವಿಧ ಪಕ್ಷಗಳಲ್ಲಿರುವ ಹಾಲಿ ಶಾಸಕರ ಪಕ್ಷ ಸೇರ್ಪಡೆ ಮತ್ತಿತರ ಕಾರಣಗಳಿಂದ ಮುಂದೂಡಲಾಗಿ ದೆ. ಇದಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒಪ್ಪಿ ಕೊಂಡಿ ದ್ದಾರೆ. ಹೀಗಾಗಿ, ಏ.16ರಂದು ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೆ, ಅಂದೇ ನೂತನ ಕೆಪಿ ಸಿಸಿ ಕಟ್ಟ ಡ ವನ್ನೂ ಉದ್ಘಾ ಟನೆ ಮಾಡ ಲಾ ಗು ವುದು ಎಂದು ಅವರು ತಿಳಿಸಿದ್ದಾರೆ.

ಮಾಜಿ ಸಚಿವ ಎಚ್‌. ವಿಶ್ವನಾಥ್‌, ಏ.10ರಂದು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ. ಈಗಾಗಲೇ ಅವರು “ಭ್ರಷ್ಟ ಸರ್ಕಾರದ ಹುಟ್ಟಿಗೆ ಕಾರಣವಾದೆ’ ಎಂದು ಪಶ್ಚಾತ್ತಾಪ ಸತ್ಯಾಗ್ರಹ ಮಾಡಿದ್ದಾರೆ. ಭಾನುವಾರ ಜೆಡಿಎಸ್‌ ಶಾಸಕರಾಗಿದ್ದ ಶಿವಲಿಂಗೇಗೌಡ ಸೇರಲಿದ್ದಾರೆ.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next