Advertisement

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

03:10 AM Dec 27, 2024 | Team Udayavani |

ಬೆಳಗಾವಿ: 2025ರಲ್ಲಿ ಪಕ್ಷದ ಸಂಘಟನೆಯನ್ನು ಬಲವರ್ಧಿಸಲಾಗುವುದು. ಹಾಗಾಗಿ, ಪಕ್ಷದೊಳಗೆ ಹೊಸ ಶಕ್ತಿ ಮತ್ತು ಹೊಸ ನಾಯಕತ್ವಕ್ಕೆ ಅವಕಾಶ ನೀಡುವುದು ಅಗತ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಗುರುವಾರ ನಡೆದ ಪಕ್ಷದ “ನಯಾ ಸತ್ಯಾಗ್ರಹ ಬೈಠಕ್‌’ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಖರ್ಗೆ ಅವರು, ಸೈದ್ಧಾಂತಿಕವಾಗಿ ಬದ್ಧತೆಯುಳ್ಳವರು, ಸಂವಿಧಾನಕ್ಕಾಗಿ ಹೋರಾಡವವರು ಮತ್ತು ಕಾಂಗ್ರೆಸ್‌ ಕಲ್ಪನೆಯ ಭಾರತದಲ್ಲಿ ನಂಬಿಕೆ ಇಟ್ಟವವರನ್ನು ನಾವು ಹುಡುಕಿ, ಅವಕಾಶ ನೀಡೋಣ ಎಂದು ಹೇಳಿದರು.

ಪಕ್ಷದ ಗೆಲುವಿಗೆ ಕೇವಲ ಕಠಿನ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ. ಸಕಾಲಿಕ ರಣತಂತ್ರ ಮತ್ತು ಅಗತ್ಯ ದಿಕ್ಸೂಚಿಯೂ ಮುಖ್ಯ. ಹಾಗಾಗಿ ಪಕ್ಷದೊಳಗೇ ಹೊಸ ನಾಯಕತ್ವವನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ| ಬಿ.ಆರ್‌. ಅಂಬೇಡ್ಕರ್‌ ವಿರುದ್ಧ ನೀಡಿದ್ದ ಹೇಳಿಕೆಯನ್ನು ಒಪ್ಪಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ ಖರ್ಗೆ, ಚುನಾವಣ ಆಯೋಗ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ಸರಕಾರ ನಿಯಂತ್ರಣ ಹೊಂದಲು ಬಯಸುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಚುನಾವಣ ಆಯೋಗ ದುರ್ಬಳಕೆ
ನಿಧಾನವಾಗಿ ಚುನಾವಣ ಆಯೋಗದ ಮೇಲಿನ ಜನರ ನಂಬಿಕೆಗೆ ಚ್ಯುತಿ ಬರುತ್ತಿದೆ. ಕೋರ್ಟ್‌ ಕೇಳಿದರೆ ಮಾಹಿತಿ ನೀಡಲು ಅವಕಾಶ ಒದಗಿಸುತ್ತಿದ್ದ ಚುನಾವಣ ನಿಯಮವನ್ನು ಕೇಂದ್ರ ಸರಕಾರ ಇತ್ತೀಚೆಗೆ ಬದಲಿಸಿದೆ. ಈ ಮೂಲಕ ಅವರು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆಂದು ಖರ್ಗೆ ಪ್ರಶ್ನಿಸಿದರು.

ಸಂವಿಧಾನ ವಿರುದ್ಧ ಶಾ ಹೇಳಿಕೆ
ಸಂಸತ್‌ನಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಅಂಬೇಡ್ಕರ್‌ ಅವರನ್ನು ಅವಮಾನಿಸಿದರು. ಈ ಕುರಿತು ನಾವು ಆಕ್ಷೇಪಿಸಿದೆವು, ಪ್ರತಿಭಟಿಸಿದೆವು, ಧರಣಿ ನಡೆಸಿದೆವು. ಈಗ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಪ್ರಧಾನಿ ಮತ್ತು ಸರ್ಕಾರ ತಮ್ಮ ತಪ್ಪು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕ್ಷಮೆ ಕೇಳುವುದಿರಲಿ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಎಐಸಿಸಿ ಅಧ್ಯಕ್ಷರು ಆರೋಪಿಸಿದರು.

Advertisement

ಬೆಳಗಾವಿಯಿಂದ ಹೊಸ ಸಂದೇಶ
ನಾವು ಹೊಸ ಸಂದೇಶ ಮತ್ತು ಹೊಸ ನಿರ್ಣಯದೊಂದಿಗೆ ಬೆಳಗಾವಿಯಿಂದ ಹೊರಡುತ್ತೇವೆ. ಹಾಗಾಗಿ, ಈ ಸಭೆಗೆ ನವ ಸತ್ಯಾಗ್ರಹ ಎಂದು ಹೆಸರಿಟ್ಟಿದ್ದೇವೆ. ಯಾಕೆಂದರೆ, ಇಂದು ಸಾಂವಿಧಾ ನಿಕ ಹುದ್ದೆಗಳಲ್ಲಿ ಇರುವವರೇ ಮಹಾತ್ಮ ಗಾಂಧಿ ಪರಂಪರೆಯನ್ನು ಪ್ರಶ್ನಿಸುತ್ತಿ ದ್ದಾರೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದವರು ಸುಳ್ಳಗಳನ್ನು ಹರಡುತ್ತಿದ್ದಾರೆ. ಸುಳ್ಳಿನ ನೆರವು ಪಡೆದು ಕೊಂಡು ನಮ್ಮನ್ನು ದೂಷಿಸುತ್ತಿದ್ದಾರೆ. ಅಂಥವರನ್ನು ನಾವು ಸೋಲಿಸಬೇಕಿದೆ ಎಂದು ಖರ್ಗೆ ಹೇಳಿದರು.

ಕುಂದಾ, ಕರದಂಟು, ರೇಷ್ಮೆ ಶಾಲು
ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ಎಲ್ಲರನ್ನೂ ರೇಷ್ಮೆ ಶಾಲು ಹಾಕಿ ಸ್ವಾಗತಿಸಲಾಯಿತು. ಕರ್ನಾಟಕದ ಪರವಾಗಿ ಎಲ್ಲರಿಗೂ ಗಾಂಧಿ  ಭಾರತ ಇತಿಹಾಸದ ಪುಸ್ತಕ ನೀಡಲಾಯಿತು. ಸ್ಥಳೀಯ ಮಹತ್ವ ತಿಳಿಸಲು ಬೆಳಗಾವಿಯ ಕುಂದಾ ಹಾಗೂ ಗೋಕಾಕ ಕುರದಂಟು, ಮೈಸೂರು ಸ್ಯಾಂಡಲ್‌ ಮಾದರಿಯ ಕಾಣಿಕೆ ನೀಡಿ ಗೌರವಿಸಲಾಯಿತು.

ವೀರಸೌಧದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣ
ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಜರಗಿದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಅಂಗವಾಗಿ ನಗರದ ಟಿಳಕವಾಡಿಯ ವೀರಸೌಧದಲ್ಲಿ ನಿರ್ಮಿಸಲಾಗಿರುವ ಗಾಂಧೀಜಿ ಪುತ್ಥಳಿಯನ್ನು ಸಿಎಂ ಸಿದ್ದರಾಮಯ್ಯ ಗುರುವಾರ ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ನವೀಕೃತ ಫೋಟೋ ಗ್ಯಾಲರಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಲೋಕಾರ್ಪಣೆಗೊಳಿಸಿದರು. ಸಚಿವರಾದ ಎಚ್‌.ಕೆ. ಪಾಟೀಲ್‌, ಎಂ.ಬಿ. ಪಾಟೀಲ್‌, ಎಚ್‌.ಸಿ. ಮಹದೇವಪ್ಪ, ಲಕ್ಷ್ಮೀ ಹೆಬ್ಟಾಳ್ಕರ್‌, ಶರಣಪ್ರಕಾಶ್‌ ದರ್ಶನಾಪುರ, ಕೆ.ಎಚ್‌. ಮುನಿಯಪ್ಪ, ಶಾಸಕರಾದ ಆಸಿಫ್‌ (ರಾಜು) ಸೇಠ್‌, ಪರಿಷತ್‌ ಸದಸ್ಯ ಚನ್ನರಾಜ್‌ ಹಟ್ಟಿಹೊಳಿ, ಮಾಜಿ ಸಿಎಂ ವೀರಪ್ಪ ಮೊಲಿ, ಆರ್‌.ವಿ. ದೇಶಪಾಂಡೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next