Advertisement

ಅರೆಹೊಳೆ: ಜಲ್ಲಿ ಮಿಶ್ರಣ ಘಟಕದಿಂದ ಪರಿಸರಕ್ಕೆ ಹಾನಿ; ಆಕ್ರೋಶ 

01:30 AM Dec 11, 2018 | Karthik A |

ಉಪ್ಪುಂದ: ನಾವುಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯ ವಿಸ್ತರೀಕರಣಕ್ಕೆ ಜಲ್ಲಿ ಪುಡಿ ಮಿಶ್ರಣ ಮಾಡುವ ಘಟಕದಿಂದಾಗಿ ಸ್ಥಳೀಯ ಪರಿಸರದ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವುಂದ ಅರೆಹೊಳೆ ಪ್ರದೇಶದಲ್ಲಿ ಮಾಡರ್ನ್ ರೋಡ್‌ ಮೇಕರ್ ಕಂಪೆನಿಯವರು ಹಾಟ್‌ ಮಿಕ್ಸ್‌, ವೆಟ್‌ ಮಿಕ್ಸ್‌ ಮತ್ತು ರೆಡಿಮಿಕ್ಸ್‌ ಕಾಂಕ್ರೀಟ್‌ ಪ್ಲಾಂಟ್‌ ನಡೆಸುತ್ತಿದ್ದು ಇದರ ಸುತ್ತಮುತ್ತಲಿನ 80ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ನೂರಾರು ಎಕ್ರರೆ ಗದ್ದೆ, ಕೃಷಿ ತೋಟಗಳಿಗೆ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ತೀವ್ರವಾದ ತೊಂದರೆ ಆಗುತ್ತಿರುವುದು ಕಂಡುಬಂದಿದೆ.

Advertisement

ಕೃಷಿಗೆ ಹಾನಿ


ಜಲ್ಲಿ ಹಾಗೂ ಕಾಂಕ್ರೀಟ್‌ ಮಿಶ್ರಣ ಘಟಕದಿಂದ ಅತೀಯಾದ ಧೂಳು ಪರಿಸರವೆಲ್ಲ ಆವರಿಸಿಕೊಳ್ಳುತ್ತಿದೆ. ಸ್ಥಳೀಯ ಜನರಲ್ಲಿ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಜಲ್ಲಿಯ ಕಣಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿ ಕೃಷಿ ಭೂಮಿಯನ್ನು ತಲುಪಿದ್ದು ಬೆಳಗಳಿಗೆ ಹಾನಿ ಉಂಟಾಗಿದೆ. ಈ ಪ್ಲಾಂಟ್‌ ಸಮೀಪದ ತೆಂಗು, ಅಡಿಕೆ ಮತ್ತು ಕಾಳು ಮೆಣಸಿನ ಬೆಳೆಗಳು ಇದರಿಂದಾಗಿ ನಾಶವಾಗುತ್ತಿವೆೆ. ಕಲುಷಿತ ನೀರು ಜಾನುವಾರುಗಳು ಕುಡಿದ ಪರಿಣಾಮ ಮೂಕಾಂಬು ಅವರ ಮನೆಯ ದನವೊಂದು ಸಾವನ್ನಪ್ಪಿದೆ. ಸ್ಥಳೀಯ ನಿವಾಸಿಗಳ ಸಮಸ್ಯೆಗಳನ್ನು ಪರಿಗಣಿಸದೆ ಮನಸ್ಸಿಗೆ ಬಂದಂತೆ ಕಾರ್ಯನಿರ್ವಹಿಸುತ್ತಿರುವ ಘಟಕದಿಂದಾಗಿ ಸಾರ್ವಜನಿಕರು ಪ್ರತಿದಿನ ಸಮಸ್ಯೆಗಳೊಂದಿಗೆ ಭಯ ಭೀತಿಯಿಂದ ಜೀವನ ಕಳೆಯುವಂತಾಗಿದ್ದು ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗೋಡೆಗಳಲ್ಲಿ ಬಿರುಕು


ದೊಡ್ಡ ದೊಡ್ಡ ಶಿಲೆಕಲ್ಲುಗಳನ್ನು ತಂದು ಯಂತ್ರದ ಮೂಲಕ ಪುಡಿ ಮಾಡುವುದರಿಂದ ದೊಡ್ಡ ಪ್ರಮಾಣದ ಶಬ್ಧ ಉಂಟಾಗುತ್ತಿದೆ. ಇದರಿಂದಾಗಿ ಪ್ಲಾಂಟ್‌ನ ಹತ್ತಿರದ ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುಗುವ ಸಾಧ್ಯತೆ ಇದ್ದು ಶಿಥಿಲಗೊಂಡಿರುವ ಗೋಡೆಗಳಿಂದ ಅಪಾಯ ಎದುರಾಗಿದೆ. ರಾತ್ರಿ ಸಮಯದಲ್ಲೂ ಕೆಲಸ ಮಾಡುತ್ತಿರುವುದರಿಂದ ನಿದ್ದೆ ಮಾಡಲು ಸಮಸ್ಯೆಯಾಗುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಪರವಾನಿಗೆ ರದ್ದು
ಈ ಜಲ್ಲಿ ಮಿಶ್ರಣ ಘಟಕದಿಂದಾಗಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಪಂಚಾಯತ್‌ಗೆ ದೂರು ಸ್ಥಳೀಯ ನಿವಾಸಿಗಳು ದೂರು ನೀಡಿರುವುದರಿಂದ ನಾವುಂದ ಗ್ರಾ.ಪಂ.ನಲ್ಲಿ ನ.28ರಂದು ತುರ್ತು ಸಭೆ ಕರೆದು ಪಂಚಾಯತ್‌ನಿಂದ ನೀಡಲಾಗಿರುವ ಪರವಾನಿಗೆ ಮತ್ತು ನಿರಾಕ್ಷೇಪಣ ಪತ್ರದ ನವೀಕರಣ ಅವಧಿ ಮುಕ್ತಾಯಗೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದು ಕಂಡುಬಂದಿರುವುದರಿಂದ ಪರವಾನಿಗೆಯನ್ನು ರದ್ದುಪಡಿಸಲು ಹಾಗೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ತುರ್ತು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ.
– ಗಣೇಶ, ಪಂ.ಅಭಿವೃದ್ಧಿ ಅಧಿಕಾರಿ ನಾವುಂದ


ಪ್ರತಿಭಟನೆ ನಡೆಸುತ್ತೇವೆ

ಜಲ್ಲಿ ಮಿಶ್ರಿತ ಘಟಕದಿಂದ ಜನರ ಆರೋಗ್ಯದ ಮೇಲೆ ಸಮಸ್ಯೆಯಾಗುತ್ತಿರುವುದನ್ನು ಕಂಪೆನಿಯ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೇ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವ ಘಟಕದಿಂದ ನಮ್ಮ ನೆಮ್ಮದಿಯ ಜೀವನಕ್ಕೆ ತೊಂದರೆಯಾಗಿದ್ದು ಈ ಕುರಿತು ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದೇವೆ.
-ನಾಗೇಂದ್ರ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next