ಬಜಪೆ: ಬಜಪೆ ಬಸ್ ನಿಲ್ದಾಣಕ್ಕೆ ಹೈಟೆಕ್ ರೂಪವನ್ನು ನೀಡಲು ಬಜಪೆ ಪಟ್ಟಣ ಪಂಚಾಯತ್ ಸಿದ್ಧತೆ ನಡೆಸುತ್ತಿದೆ. ಬಜಪೆ ಪಟ್ಟಣ ಪಂಚಾಯತ್ ಈಗಾಗಲೇ ನಗರೋತ್ಥಾನ ಯೋಜನೆಯಡಿಯಲ್ಲಿ 90 ಲಕ್ಷ ರೂ.ಮೀಸಲು ಇಟ್ಟಿದೆ. ಹೈಟೆಕ್ ಬಸ್ ನಿಲ್ದಾಣದ ಜತೆ ಮಾರುಕಟ್ಟೆಯನ್ನು ಕೂಡ ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಪೊದೆ, ಗಿಡಗಂಟಿಗಳಿಂದ ತುಂಬಿದ್ದ ಜಾಗವನ್ನು ಗುರುವಾರದದಿಂದ ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿದೆ.
ಹೈಟೆಕ್ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ
2011-12ರಲ್ಲಿ ಬಜಪೆ ಗ್ರಾ.ಪಂ.ಆಗಿದ್ದ ಸಂದರ್ಭದಲ್ಲಿ ಇಲ್ಲಿ ಬಸ್ ನಿಲ್ದಾಣ ಮತ್ತು ವಾಣಿಜ್ಯ ಕಟ್ಟಡಕ್ಕೆಂದು ಸುಮಾರು 12ಲಕ್ಷ ರೂ. ಅನುದಾನ ವ್ಯಯಿಸಲಾ ಗಿತ್ತು. ಅನಂತರ ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆಗ ಕಟ್ಟಡದ ಪ್ಲಿಂಟ್ ಹಾಗೂ ಬೀಮ್‌ಗಳ ಕಾಮಗಾರಿ ನಡೆದಿತ್ತು.
ತಜ್ಞರಿಂದ ಸಾಮಾರ್ಥ್ಯ ಪರೀಕ್ಷೆ
ಈ ಹಿಂದೆ ನಡೆದಿದ್ದ ವ್ಯಾಣಿಜ್ಯ ಕಟ್ಟಡ ಕಾಮಗಾರಿಯ ಪ್ಲಿಂಟ್, ಬೀಮ್ ಹಾಗೂ ಸರಳುಗಳ ಸಾಮರ್ಥ್ಯ ಪರೀಕ್ಷೆಯನ್ನು ತಜ್ಞರು ಮಾಡಲಿದ್ದಾರೆ. ಆ ಬಳಿಕವೇ ಈ ಕಟ್ಟಡದ ರೂಪುರೇಷೆ ಹಾಕಲಾಗುತ್ತದೆ. ಬಸ್ ನಿಲ್ದಾಣ ಈ ಕಟ್ಟಡಲ್ಲಿಯೇ ನಿರ್ಮಾಣವಾಗಲಿದೆ. ರಾಜ್ಯ ಹೆದ್ದಾರಿ ಅಗಲೀಕರಣದಿಂದ ಈಗಿನ ಬಸ್ ನಿಲ್ದಾಣದಲ್ಲಿ ಜಾಗದ ಸಮಸ್ಯೆ ಬರುವ ಸಾಧ್ಯತೆಗಳು ಇರುವ ಕಾರಣ ಅದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತದೆ.
ಹಂತ ಹಂತ ಕಟ್ಟಡ ನಿರ್ಮಾಣ
ವಾಣಿಜ್ಯ ಮಾರುಕಟ್ಟೆ ಹಾಗೂ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗಳು ಹಂತಹಂತವಾಗಿ ನಡೆಯಲಿವೆ. ನೆಲಮಹಡಿ ಕಾಮಗಾರಿ ಮೊದಲು ನಡೆಯಲಿದೆ. ಬಳಿಕ ಮೇಲಂತಸ್ತು ಕಾಮಗಾರಿಗಳು ನಡೆಯಲಿದೆ. ಹೈಟೆಕ್ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ನಿರ್ಮಾಣ ಬಜಪೆ ಪೇಟೆಗೆ ಹೊಸಮೆರಗು ನೀಡಲಿದೆ.
ಮೂಲ ಸೌಕರ್ಯಗಳಿಗೆ ಆದ್ಯತೆ
ಹೈಟೆಕ್ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳಾದ ನೀರಿನ ವ್ಯವಸ್ಥೆ, ಕೈತೊಳೆಯುವ ಬೇಸಿನ್, ಮಹಿಳೆಯರಿಗೆ ಪ್ರತ್ಯೇಕ ಕೊಠಡಿ, ಏಜೆಂಟ್ ಹಾಗೂ ಟೈಮರ್‌ಗಳಿಗೆ ಕೊಠಡಿ, ಶೌಚಾಲಯದ ವ್ಯವಸ್ಥೆಯ ಬಗ್ಗೆ ಚಿಂತಿಸಲಾಗಿದೆ.
-ಸುಬ್ರಾಯ ನಾಯಕ್ ಎಕ್ಕಾರು