ಕುಷ್ಟಗಿ: ಗತ ಕಾಲದ ಇತಿಹಾಸ ಓದಿದಾಗ ಮಾತ್ರ ದೇಶದ ಬಗ್ಗೆ ಗೌರವ ಬರಲು ಸಾದ್ಯ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014-2015 ಮತ್ತು 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನವಾಗಿ ನಿರ್ಮಿಸಿದ ಆಡಿಟೋರಿಯಂ (ಸಭಾ ಭವನ) ಲೋಕಾರ್ಪಣೆ ಹಾಗೂ ಸ್ವಾತಾಂತ್ರಾಮೃತ ಸ್ಮರಣ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮನೆಯಲ್ಲಿ ಪುಸ್ತಕಗಳ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ಇದೀಗ ಜಗತ್ತು ಸುಧಾರಣೆಯಾದಂತೆ ಪುಸ್ತಕಗಳ ಬದಲಿಗೆ ಮೊಬೈಲ್ ಹಾವಳಿಯಿಂದ ಓದುವ ಅಭಿರುಚಿ ಕಡಿಮೆಯಾಗಿದೆ.
ಸ್ಮಾರ್ಟ್ ಫೋನ್ ಬಹುತೇಕರು ಬಳಸುವರಾಗಿದ್ದು, ಒಳಿತೋ..ಕೆಡುಕೋ.. ಎಂಬುದರ ಕುರಿತು ಈ ಮೊಬೈಲ್ ಮಾದ್ಯಮ ಪ್ರಭಾಶಾಲಿಯಾಗಿದೆ. ಪದೇ ಪದೇ ಮೊಬೈಲ್ ನೋಡುವ ಗೀಳು ಹೆಚ್ಚಿದ್ದು, ಮೊಬೈಲ್ ಎಷ್ಟು ಬೇಕೋ ಅಷ್ಟನ್ನು ಬಳಸುತ್ತಿಲ್ಲ. ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಮಹಿಳೆಯರು ಸಹ, ಮೊಬೈಲ್ ನಲ್ಲಿ ಮುಳುಗಿದ್ದು, ಮಗು ಹಠ ಮಾಡಿದರೆ ಮೊಬೈಲ್ ಕೊಟ್ಟು ಸಮಾಧಾನ ಪಡಿಸುವ ಪರಿಸ್ಥಿತಿ ಇದೆ. ಮನೆಯಲ್ಲಿ ಸ್ಮಾರ್ಟ್ ಫೋನ್ ಬಳಕೆ ಕಡಿಮೆಯಾಗಬೇಕಿದ್ದು, ಪುಸ್ತಕ ಓದುವ ಅಭಿರುಚಿ ರೂಢಿಸಿಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು.
ಈ ಆಡಿಟೋರಿಯಂ ಶೈಕ್ಷಣಿಕ, ಸಾಹಿತ್ಯಿಕ ಕಾರ್ಯ ಚಟುವಟಿಕೆಗಳಿಗೆ ಕನಿಷ್ಠ 5 ಸಾವಿರ ರೂ. ನಿರ್ವಹಣೆಗೆ ನಿಗದಿಪಡಿಸಿ ಅಚ್ಚು ಕಟ್ಟಾಗಿ ನಿರ್ವಹಿಸಿ ಬಹುದಿನಗಳವರೆಗೂ ಬಾಳಿಕೆ ಬರಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ತಹಶಿಲ್ದಾರ ಎಂ. ಗುರುರಾಜ್ ಚಲವಾದಿ, ಪ್ರಾಚಾರ್ಯ ಡಾ.ಎಸ್.ವಿ.ಡಾಣಿ,ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ, ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ತಾಜುದ್ದೀನ ದಳಪತಿ, ಡಾ.ಶರಣಪ್ಪ ನಿಡಶೇಸಿ ಮತ್ತಿತರರಿದ್ದರು. ಜೀವನಸಾಬ್ ಬಿನ್ನಾಳ ಕಾರ್ಯಕ್ರಮ ನಿರ್ವಹಿಸಿದರು.