ಹನೂರು: ಪಪಂನಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆಗಳ ಬಹಿರಂಗ ಮರು ಹರಾಜು ಮಂಗಳವಾರ ನಡೆಯಿತು. ಕಳೆದ 3 ವರ್ಷದ ಹಿಂದೆ ಪಪಂ ಅನುದಾನದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವುದರ ಜತೆಗೆ ಪಪಂಗೆ ಆದಾಯ ಬರುವ ದೃಷ್ಟಿಯಿಂದ 36 ಅಂಗಡಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಈ ಅಂಗಡಿ ಮಳಿಗೆಗಳನ್ನು 2016ರಲ್ಲಿ ಟೆಂಡರ್ ಮೂಲಕ ಬಾಡಿಗೆಗೆ ನೀಡಲಾಗಿತ್ತು.
ಈ ವೇಳೆ ಟೆಂಡರ್‌ದಾರರ ಪೈಪೋಟಿಯಿಂದ ಅಂಗಡಿಗಳ ಬಾಡಿಗೆ ದರ ತಿಂಗಳಿಗೆ 6,500 ರೂ.ನಿಂದ ಹಿಡಿದು 34,300 ರೂ.ರವರೆಗೆ ನಡೆದಿತ್ತು. ಬಳಿಕ ಬಾಡಿಗೆದಾರರು ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದರು. ಆದರೆ, ಮೂರು ತಿಂಗಳ ನಂತರ 6 ಮಳಿಗೆಗಳನ್ನು ಹೊರತುಪಡಿಸಿ ಇನ್ನುಳಿದ ಮಳಿಗೆಗಳ ಬಾಡಿಗೆದಾರರು ಹಣ ಪಾವತಿಸದ ಕಾರಣ ಪಪಂ ಆಡಳಿತ ಮಳಿಗೆಗಳಿಗೆ ಬೀಗ ಹಾಕಲಾಗಿತ್ತು. 2 ವರ್ಷವೇ ಕಳೆದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರು ಟೆಂಡರ್ ಕರೆಯಲಿಲ್ಲ. ಪರಿಣಾಮ ಬರುವ ಆದಾಯ ಪಪಂಗೆ ಖೋತಾ ಆಗಿತ್ತು.
ಮಳಿಗೆಗಳಿಗೆ ಜೀವಕಳೆ: ಪಟ್ಟಣದಲ್ಲಿ ಬಹುತೇಕ ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದು, ಇವರು ಬಸ್ ನಿಲ್ದಾಣದ ಅಕ್ಕ ಪಕ್ಕ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇವರೆಲ್ಲರೂ ಕಳೆದ ವರ್ಷದ ಹಿಂದೆ ಮಳಿಗೆಗಳನ್ನು ಮರು ಟೆಂಡರ್ ಕರೆದು ಬಾಡಿಗೆ ನೀಡುವಂತೆ ಒತ್ತಾಯಿಸಿದ್ದರು. ಈ ದಿಸೆಯಲ್ಲಿ ಶಾಸಕ ಆರ್. ನರೇಂದ್ರ ಸಾಮಾನ್ಯ ಸಭೆಯಲ್ಲಿ ಮಳಿಗೆಗಳ ಮರು ಟೆಂಡರ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಬಾಡಿಗೆಗೆ ನೀಡುವಂತೆ ಪಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆಯೇ ಮುಖ್ಯಾಧಿಕಾರಿ ಮೂರ್ತಿ ಅವರು ಅಗತ್ಯ ಕ್ರಮವಹಿಸಿದ್ದು, ಮಂಗಳವಾರ ಟೆಂಡರ್ ನಡೆಯಿತು. ಇದರಿಂದ 2 ವರ್ಷದಿಂದ ಮುಚ್ಚಿದ್ದ ಮಳಿಗೆಗಳಿಗೆ ಜೀವಕಳೆ ಬಂದಂತಾಯಿತು.
ಮಳಿಗೆಗಳ ಮೀಸಲು ಹಂಚಿಕೆ: 28 ಮಳಿಗೆಗಳಿಗೆ ಮರು ಟೆಂಡರ್ ಕರೆಯಲಾಗಿದ್ದು, ಇದರಲ್ಲಿ 17, 18, 19, 29, 32, 33 ಸಂಖ್ಯೆಯ ಮಳಿಗೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ, 2, 4, 5, 9, 14, 16, 20, 22-28, 30, 31, 35, 36ರ ಮಳಿಗೆಗಳು ಸಾಮಾನ್ಯ ವರ್ಗಕ್ಕೆ ಹಾಗೂ 21 ಸಂಖ್ಯೆಯ ಮಳಿಗೆ ವಿಕಲಚೇತನರಿಗೆ, 1ರ ಮಳಿಗೆ ಪರಿಶಿಷ್ಟ ಜಾತಿ ಹಾಗೂ 10ರ ಮಳಿಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರಿಸಲಾಗಿತ್ತು. ಮರು ಟೆಂಡರ್‌ನಲ್ಲಿ ಭಾಗವಹಿಸುವವರಿಗೆ 80 ಸಾವಿರ ಠೇವಣಿ ಮೊತ್ತ ನಿಗದಿಪಡಿಸಲಾಗಿದ್ದು, ಮಳಿಗೆಯ ಪ್ರತಿ ತಿಂಗಳ ಬಾಡಿಗೆ 2,500ರಿಂದ ಕರೆಯಲಾಯಿತು. ಬಿಡ್‌ನಲ್ಲಿ 2,600 ರೂನಿಂದ 23,700 ರೂ. ವರೆಗೆ ಮಳಿಗೆಗಳನ್ನು ಬಾಡಿಗೆ ನೀಡಲಾಯಿತು. ಆದರೆ, ವಿಕಲಚೇತನರಿಗೆ ಮೀಸಲಾಗಿದ್ದ 21 ಸಂಖ್ಯೆಯ ಮಳಿಗೆಗೆ ಯಾರು ಟೆಂಡರ್‌ಗೆ ಭಾಗವಹಿಸದ ಪರಿಣಾಮ ಹಾಗೆಯೇ ಉಳಿಸಲಾಗಿದೆ.
ಎಲ್ಲದಕ್ಕೂ ಟೆಂಡರ್: ಪ್ರಾರಂಭದಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸುವ ಖಾಸಗಿ ಬಸ್‌ಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ, ಕ್ರಮೇಣ ಶುಲ್ಕ ವಸೂಲಾತಿ ಸ್ಥಗಿತವಾಗಿತ್ತು. ಇದರಿಂದ ಪಪಂಗೆ ಬರುತ್ತಿದ್ದ ಆದಾಯ ಕೈತಪ್ಪಿತ್ತು. ಇದರಿಂದ ಸೂಕ್ತ ಕ್ರಮವಹಿಸಿದ ಪಪಂ ಅಧಿಕಾರಿಗಳು ಬಸ್‌ಗಳಿಂದ ಶುಲ್ಕ ವಸೂಲಿಗಾಗಿಯೂ ಮಂಗಳವಾರ ಟೆಂಡರ್ ಕರೆಯಲಾಗಿತ್ತು. ಭಾಗವಹಿಸಿದ್ದ ಚಂದ್ರು ಎಂಬವರು 1 ಲಕ್ಷ ರೂ. ಠೇವಣಿ ಹಣ ಪಾವತಿಸಿ 7,300 ರೂಗೆ ಟೆಂಡರ್ ಪಡೆದರು. ಜತೆಗೆ ಸತೀಶ್ ಎಂಬವರು 7,200 ರೂ.ಗೆ ನೆಲ ಸುಂಕದ ಟೆಂಡರ್ ಪಡೆದುಕೊಂಡರು. ಇನ್ನು ಅಂಬೇಡ್ಕರ್ ವೃತ್ತದಲ್ಲಿನ ವಾಣಿಜ್ಯ 7 ಮಳಿಗೆಗಳಿಗೆ ಟೆಂಡರ್ ನೀಡಲಾಯಿತು. ಈ ವೇಳೆ ಪಪಂ ಮುಖ್ಯಾಧಿಕಾರಿ ಮೂರ್ತಿ, ಕಂದಾಯ ಇಲಾಖೆಯ ಶಿರಸ್ತೆದಾರ್ ಸುರೇಶ್, ಇಂಜಿನೀಯರ್ ಶಿವಶಂಕರ ಆರಾಧ್ಯ ಹಾಗೂ ಕಚೇರಿಯ ನೌಕರರು ಹಾಜರಿದ್ದರು.