Advertisement

RCB ತಂಡ ಈಗ ಹೆಚ್ಚು ಸಂತುಲಿತ: ಸ್ಮತಿ ಮಂಧನಾ

11:23 PM Feb 19, 2024 | Team Udayavani |

ಹೊಸದಿಲ್ಲಿ: ದ್ವಿತೀಯ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಗೆ ಇನ್ನು ಮೂರೇ ದಿನಗಳು ಬಾಕಿ. ಎಲ್ಲ ತಂಡಗಳು ಉತ್ತಮ ನಿರ್ವಹಣೆಯ ಗುರಿಯೊಂದಿಗೆ ಭರದ ಸಿದ್ಧತೆಯಲ್ಲಿವೆ. ಕಳೆದ ಸಲ ಕಳಪೆ ನಿರ್ವಹಣೆ ತೋರಿದ ಸ್ಮತಿ ಮಂಧನಾ ನಾಯಕತ್ವದ ಆರ್‌ಸಿಬಿ ಮೇಲೆ ಈ ಬಾರಿ ಯಾವ ಭರವಸೆ ಇಡಬಹುದು ಎಂಬುದು ಅಭಿಮಾನಿಗಳ ಪ್ರಶ್ನೆ.

Advertisement

ಈ ಕುರಿತು ಮಾತಾಡಿದ ಸ್ಮತಿ ಮಂಧನಾ, “ಅನೇಕ ಮಂದಿ ಪ್ರತಿಭಾನ್ವಿತರು ಹಾಗೂ ಹೊಸಬರಿಂದ ಕೂಡಿರುವ ಕಾರಣ ಈ ಬಾರಿಯ ತಂಡ ಹೆಚ್ಚು ಸಂತುಲಿತವಾಗಿದೆ. ಖಂಡಿತವಾಗಿಯೂ ಮೊದಲ ಸೀಸನ್‌ಗಿಂತ ಉತ್ತಮ ಪ್ರದರ್ಶನ ನೀಡಬೇಕೆಂಬುದೇ ನಮ್ಮ ಗುರಿ. ಕೆಲವು ಆಟಗಾರ್ತಿಯರನ್ನು ಕೈಬಿಡಲಾಗಿದೆ. ಇವರ ಸ್ಥಾನಕ್ಕೆ ಹೊಸಬರನ್ನು ಸೇರಿಸಿಕೊಳ್ಳಲಾಗಿದೆ. ತಂಡದ ಸಮತೋಲನಕ್ಕೇನೂ ತೊಂದರೆ ಆಗಿಲ್ಲ’ ಎಂದರು.
ಆರ್‌ಸಿಬಿ ಕೋಮಲ್‌ ಝಂಜಾದ್‌, ಪೂನಂ ಖೆಮ್ನಾರ್‌, ಪ್ರೀತಿ ಬೋಸ್‌, ಸಹನಾ ಪವಾರ್‌, ಡೇನ್‌ ವಾನ್‌ ನೀಕರ್ಕ್‌, ಎರಿಲ್‌ ಬರ್ನ್ಸ್ ಮತ್ತು ಮೆಗಾನ್‌ ಶಟ್‌ ಅವರನ್ನು ಕೈಬಿಟ್ಟಿದೆ.

ಸ್ಟಾರ್‌ ಆಟಗಾರ್ತಿಯರು
ಎಡಗೈ ಸ್ಪಿನ್ನರ್‌ ಎಕ್ತಾ ಬಿಷ್ಟ್, ಪೇಸರ್‌ ಕೇಟ್‌ ಕ್ರಾಸ್‌, ಲೆಗ್‌ಸ್ಪಿನ್ನರ್‌ ಜಾರ್ಜಿಯಾ ವೇರ್‌ಹ್ಯಾಮ್‌, ಆಲ್‌ರೌಂಡರ್‌ ಎಸ್‌. ಮೇಘನಾ, ಮಧ್ಯಮ ವೇಗಿ ಸಿಮ್ರಾನ್‌ ಬಹಾದೂರ್‌, ಎಡಗೈ ಸ್ಪಿನ್ನರ್‌ ಸೋಫಿ ಮೊಲಿನಾಕ್ಸ್‌, ತವರಿನ ಪ್ರತಿಭೆ ಶುಭಾ ಸತೀಶ್‌ ಅವರೆಲ್ಲ ಆರ್‌ಸಿಬಿಯ ಸ್ಟಾರ್‌ ಆಟಗಾರ್ತಿಯರಾಗಿದ್ದಾರೆ.

“ಕಳೆದ ವರ್ಷ ನಾವೆಲ್ಲ ಒಂದುಗೂಡಿದ್ದೇ ಪಂದ್ಯಾವಳಿಗೆ ಎರಡು ದಿನ ಇರುವಾಗ. ಹೀಗಾಗಿ ಶೇ. 90ರಷ್ಟು ಆಟಗಾರ್ತಿಯರ ಬಗ್ಗೆ ತಿಳಿದಿರಲಿಲ್ಲ. ಅವರ ಹೆಚ್ಚುಗಾರಿಕೆ ಏನು, ಅವರಿಂದ ಏನು ಸಾಧ್ಯವಾಗದು ಎಂಬುದೆಲ್ಲ ತಿಳಿದಿರಲಿಲ್ಲ. ಆದರೆ ಈ ಬಾರಿ ಈಗಾಗಲೇ ಆಟಗಾರ್ತಿಯರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳೆರಡನ್ನೂ ಅರಿಯಲಾಗಿದೆ. ಹೀಗಾಗಿ ನಾವು ಉತ್ತಮ ಆಟ ಆಡಬಲ್ಲೆವು ಎಂಬ ನಂಬಿಕೆ ಇದೆ’ ಎಂಬುದಾಗಿ ಮಂಧನಾ ಹೇಳಿದರು.

2023ರ ಚೊಚ್ಚಲ ಪಂದ್ಯಾವಳಿಯ 8 ಪಂದ್ಯಗಳಲ್ಲಿ 6 ಸೋಲನುಭವಿಸಿದ ಆರ್‌ಸಿಬಿ, 5 ತಂಡಗಳ ಕೂಟದಲ್ಲಿ 4ನೇ ಸ್ಥಾನಕ್ಕೆ ಕುಸಿದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next