ಬೆಂಗಳೂರು: ಕಳೆದ ಪಂದ್ಯದಲ್ಲಿ ಬೌಲಿಂಗ್ ಕಾರಣದಿಂದ ಸೋಲನುಭವಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ವಿರುದ್ದ ಬ್ಯಾಟರ್ ಗಳ ನೀರಸ ಪ್ರದರ್ಶನಕ್ಕೆ ಮತ್ತೆ ಸೋಲು ಕಂಡಿದೆ. ರಾಹುಲ್ ಬಳಗದ ಶಿಸ್ತುಬದ್ದ ಬೌಲಿಂಗ್ ಎದುರು ಪರದಾಡಿದ ಆರ್ ಸಿಬಿ 28 ರನ್ ಅಂತರದ ಸೋಲು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಲಕ್ನೋ ಐದು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದರೆ, ಆರ್ ಸಿಬಿ ತಂಡವು 19.3 ಓವರ್ ಗಳಲ್ಲಿ 153 ರನ್ ಗೆ ಆಲೌಟಾಯಿತು.
ಡಿಕಾಕ್ ಅಬ್ಬರ: ಈ ಬಾರಿಯ ಕೂಟದಲ್ಲಿ ಇದುವರೆಗೆ ತಣ್ಣಗಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಇಂದು ಚಿನ್ನಸ್ವಾಮಿಯಲ್ಲಿ ಅಬ್ಬರಿಸಿದರು. 56 ಎಸೆತ ಎದುರಿಸಿದ ಕ್ವಿಂಟನ್ 81 ರನ್ ಗಳಿಸಿದರು. ಇದರಲ್ಲಿ ಅವರು ಎಂಟು ಫೋರ್ ಮತ್ತು ಐದು ಭರ್ಜರಿ ಸಿಕ್ಸರ್ ಬಾರಿಸಿದರು.
ನಾಯಕ ರಾಹುಲ್ ಆಟ 20 ರನ್ ಗಳಿಗೆ ಅಂತ್ಯವಾಯಿತು. ಮತ್ತೊಬ್ಬ ಕನ್ನಡಿಗ ಪಡಿಕ್ಕಲ್ ಆರು ರನ್ ಮಾತ್ರ ಮಾಡಿದರು. ಎರಡು ಸಿಕ್ಸರ್ ಸಿಡಿಸಿ ಸ್ಟೋಯಿನಸ್ 24 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿ ನಿಕೋಲಸ್ ಪೂರನ್ ಭರ್ಜರಿ 40 ರನ್ ಮಾಡಿದರು. ಕೇವಲ 21 ಎಸೆತ ಎದುರಿಸಿದ ಪೂರನ್ ಭರ್ಜರಿ ಐದು ಸಿಕ್ಸರ್ ಬಾರಿಸಿದರು. ಅದರಲ್ಲಿಯೂ ಟೋಪ್ಲೆ ಕೊನೆಯ ಓವರ್ ನಲ್ಲಿ ಹ್ಯಾಟ್ರಿಕ್ ಎಸೆತಗಳನ್ನು ಮೈದಾನದಾಚೆ ಅಟ್ಟಿದರು.
ಆರ್ ಸಿಬಿ ಪರ ಮ್ಯಾಕ್ಸವೆಲ್ ಎರಡು ವಿಕೆಟ್ ಕಿತ್ತರೆ, ರೀಸ್ ಟೋಪ್ಲೆ, ಯಶ್ ದಯಾಳ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ಆರಂಭಿಕ ಕುಸಿತ
ಚಿನ್ನಸ್ವಾಮಿಯಲ್ಲಿ ದೊಡ್ಡದೇನು ಅಲ್ಲದ 182 ರನ್ ಚೇಸ್ ಮಾಡಲು ಹೊರಟ ಆರ್ ಸಿಬಿ ಸತತ ವಿಕೆಟ್ ಕಳೆದುಕೊಂಡಿತು. ವಿರಾಟ್ 22 ರನ್ ಗಳಿಸಿ ಕ್ಯಾಚ್ ನೀಡಿದರೆ, ಪಡಿಕ್ಕಲ್ ಅದ್ಭುತ ಥ್ರೋಗೆ ನಾಯಕ ಫಾಪ್ ರನೌಟಾದರು. ಗ್ಲೆನ್ ಮ್ಯಾಕ್ಸವೆಲ್ ಮತ್ತೆ ಶೂನ್ಯ ಸುತ್ತಿದರೆ, ಗ್ರೀನ್ ಗಳಿಕೆ 9 ರನ್ ಮಾತ್ರ. ಪಾಟಿದಾರ್ 29 ರನ್ ಮತ್ತು ಮಹಿಪಾಲ್ ಲುಮ್ರೋರ್ 33 ರನ್ ಗಳಿಸಿ ಅಲ್ಪ ಹೋರಾಟ ಪ್ರದರ್ಶಿಸಿದರು.
ಲಕ್ನೋ ಪರ ಯುವ ವೇಗಿ ಮಯಾಂಕ್ ಯಾದವ್ ಮತ್ತೆ ಮಿಂಚಿದರು. ನಾಲ್ಕು ಓವರ್ ಎಸೆದ ಮಯಾಂಕ್ ಕೇವಲ 14 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಿತ್ತರು. ನವೀನ್ ಹಕ್ ಎರಡು ವಿಕೆಟ್, ಎಂ.ಸಿದ್ದಾರ್ಥ್, ಸ್ಟೋಯಿನಸ್ ಮತ್ತು ಯಶ್ ಥಾಕೂರ್ ತಲಾ ಒಂದು ವಿಕೆಟ್ ಕಿತ್ತರು.