ಮೆಲ್ಬೋರ್ನ್: ಭಾರತದ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಸ್ಯಾಮ್ ಕಾನ್ಸ್ಟಾಸ್ (Sam Konstas) ನಡುವಿನ ಡಿಕ್ಕಿ ಭಾರೀ ಸುದ್ದಿಯಾಗಿದೆ. ಇದೀಗ ವಿರಾಟ್ ಗೆ ದಂಡ ವಿಧಿಸಲಾಗಿದೆ.
ಎಂಸಿಜಿ ಪಂದ್ಯದಲ್ಲಿ ಆಸೀಸ್ ಪರವಾಗಿ 19 ವರ್ಷದ ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಪದಾರ್ಪಣೆ ಮಾಡಿದರು. ಮೊದಲ ದಿನವೇ ಮಿಂಚಿದ ಸ್ಯಾಮ್ ಅರ್ಧಶತಕ ಬಾರಿಸಿದರು. ಅದರಲ್ಲೂ ಟೀಂ ಇಂಡಿಯಾದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಓವರ್ ಗೆ ಮನಬಂದಂತೆ ಬಾರಿಸಿದರು. 60 ರನ್ ಗಳಿಸಿದ ಅವರು ಜಡೇಜಾಗೆ ಔಟಾದರು.
ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಅನಗತ್ಯ ವಿಚಾರವಾಗಿ ಸುದ್ದಿಯಾದರು. ಸ್ಯಾಮ್ ಕಾನ್ಸ್ಟಾಸ್ ಅವರಿಗೆ ಬೇಕಂತಲೇ ಡಿಕ್ಕಿ ಹೊಡೆದ ವಿರಾಟ್ ಮೈದಾನದಲ್ಲಿ ಯುವ ಆಟಗಾರನನ್ನು ಕೆಣಕಿದರು.
ಆಸ್ಟ್ರೇಲಿಯಾ ಇನ್ನಿಂಗ್ಸ್ನ 10 ಮತ್ತು 11 ನೇ ಓವರ್ಗಳ ನಡುವಿನ ವಿರಾಮದ ಸಮಯದಲ್ಲಿ, ಸ್ಯಾಮ್ ಕಾನ್ಸ್ಟಾಸ್ ಮತ್ತು ಉಸ್ಮಾನ್ ಖ್ವಜಾ ಬದಿಗಳನ್ನು ಬದಲಾಯಿಸುತ್ತಿದ್ದಾಗ ಕೊಹ್ಲಿ ಯುವ ಬ್ಯಾಟರ್ನತ್ತ ನಡೆದು ಅವರಿಗೆ ಡಿಕ್ಕಿ ಹೊಡೆದರು. ಆ ಸಮಯದಲ್ಲಿ ಕಾಮೆಂಟರಿಯಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಕೊಹ್ಲಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ ಎಂದು ಟೀಕಿಸಿದರು.
ರೀಪ್ಲೇಗಳು ಕೊಹ್ಲಿಗೆ ತನ್ನ ದಾರಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿತ್ತು ಎಂದು ತೋರಿಸಿದೆ, ಆದರೆ ಸ್ಯಾಮ್ ಕಾನ್ಸ್ಟಾಸ್ ತಲೆ ತಗ್ಗಿಸಿ ತನ್ನ ಗ್ಲೌಸ್ ಗಳನ್ನು ಸರಿಹೊಂದಿಸುತ್ತಾ ಬರುತ್ತಿದ್ದರು. ಈ ವೇಳೆ ಕೊಹ್ಲಿ ಬಂದು ಡಿಕ್ಕಿ ಹೊಡೆದಿದ್ದಾರೆ.
ವಿರಾಟ್ ಗೆ ದಂಡ
ವಿರಾಟ್ ಕೊಹ್ಲಿ ಅವರಿಗೆ ದಿನದಾಟದ ಬಳಿಕ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. “ವಿರಾಟ್ ಕೊಹ್ಲಿ ಅವರನ್ನು ಲೆವೆಲ್ 1 ಅಪರಾಧಕ್ಕೆ ಛೀಮಾರಿ ಹಾಕಲಾಗಿದೆ. ಅವರಿಗೆ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಲಾಗಿದೆ” ಎಂದು ವರದಿ ಹೇಳಿದೆ.