ಹೊಸದಿಲ್ಲಿ : ಸಾಲ ವೆಚ್ಚವನ್ನು ಕಡಿಮೆ ಮಾಡಬೇಕೆಂಬ ಸರಕಾರದ ಒತ್ತಡಕ್ಕೆ ಮಣಿಯದ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ಪ್ರಕಟಿಸಿರುವ 2017-18ರ ಹಾಲಿ ಹಣಕಾಸು ಸಾಲಿನ ನಾಲ್ಕನೇ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರಿಪೋ ದರವನ್ನು (ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು) ಶೇ.6ರ ಪ್ರಮಾಣದಲ್ಲೇ ಯಥಾವತ್ತಾಗಿ ಉಳಿಸಿಕೊಂಡಿದೆ.
ಕಳೆದ ಜೂನ್ ತ್ತೈಮಾಸಿಕದಲ್ಲಿ , ಮೂರು ವರ್ಷಗಳ ಕನಿಷ್ಠ ಮಟ್ಟವಾಗಿ ಶೇ. 5.7ಕ್ಕೆ ಕುಸಿದಿರುವ ದೇಶದ ಜಿಡಿಪಿಗೆ ಉತ್ತೇಜನ ನೀಡುವ ಸಲುವಾಗಿ ಬಡ್ಡಿ ದರಗಳನ್ನು ಕಡಿತ ಮಾಡಬೇಕೆಂದು ಸರಕಾರ ಆರ್‌ಬಿಐ ಮೇಲೆ ಅಗಾಧ ಒತ್ತಡವನ್ನು ಹೇರಿತ್ತು.
ಆದರೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಸರಕಾರದ ಈ ಒತ್ತಡಕ್ಕೆ ಮಣಿಯದೆ ಬ್ಯಾಂಕಿಂಗ್ ವ್ಯವಸ್ಥೆಗೆ ನಗದು ಪೂರೈಕೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವ ರಿಪೋ ಬಡ್ಡಿ ದರವನ್ನು ಈಗಿನ ಶೇ.6ರ ಪ್ರಮಾಣದಲ್ಲೇ ಉಳಿಸಿಕೊಳ್ಳುವ ಛಾತಿಯನ್ನು ತೋರಿದರು.
ಆರ್ಥಿಕಾಭಿವೃದ್ಧಿಗೆ ಇಂಬು ಕೊಡುವ ಯತ್ನವನ್ನು ಜಾರಿಯಲ್ಲಿರಿಸುವ ನಡುವೆಯೇ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ (ಶೇ.2 ಹೆಚ್ಚು ಅಥವಾ ಕಡಿಮೆ) ಇರಿಸಿಕೊಳ್ಳುವ ಮಧ್ಯಮ ಅವಧಿಯನ್ನು ಗುರಿಯನ್ನು ಸಾಧಿಸುವ ನಮ್ಮ ಹಣಕಾಸು ನೀತಿಗೆ ಅನುಗುಣವಾಗಿ ರಿಪೋ ದರವನ್ನು ಈಗಿನ ಶೇ.6ರ ಪ್ರಮಾಣದಲ್ಲೇ ಉಳಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ’ ಎಂದು ಆರ್‌ಬಿಐ ತನ್ನ ನಾಲ್ಕನೇ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಸ್ಪಷ್ಟಪಡಿಸಿದೆ.
ತರಕಾರಿ ಹಾಗೂ ಹಣ್ಣು ಹಂಪಲುಗಳು ಕಳೆದ ಆಗಸ್ಟ್‌ನಲ್ಲಿ ಐದು ತಿಂಗಳ ಗರಿಷ್ಠ ಮಟ್ಟವಾಗಿ ಶೇ.3.36ಕ್ಕೆ ನೆಗೆದಿದ್ದು ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಕಳೆದ ಜುಲೈ ತಿಂಗಳಲ್ಲಿ ಶೇ.2.36 ಆಗಿತ್ತು.
ಕಳೆದ ಆಗಸ್ಟ್ ತಿಂಗಳ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ರಿಪೋ ದರವನ್ನು ಶೇ.0.25ರಷ್ಟು ಇಳಿಸಿ ಶೇ.6ಕ್ಕೆ ಅದನ್ನು ನಿಗದಿಸಿತ್ತು. ಆಗ ಮಾಡಲಾಗಿದ್ದ ರೇಟ್ ಕಟ್ ಕಳೆದ 10 ತಿಂಗಳಲ್ಲೇ ಮೊದಲನೇಯದಾಗಿದ್ದು ಬಡ್ಡಿದರಗಳು 7 ವರ್ಷಗಳ ಕನಿಷ್ಠ ಪ್ರಮಾಣಕ್ಕೆ ಹತ್ತಿರವಾಗಿದ್ದವು. 2016ರ ಅಕ್ಟೋಬರ್‌ನಲ್ಲಿ ರಿಪೋ ಬಡ್ಡಿದರವನ್ನು ಶೇ.0.25ರಷ್ಟು ಇಳಿಸಿ ಶೇ.6.25ಕ್ಕೆ ನಿಗದಿಸಲಾಗಿತ್ತು.