ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳದೊಂದಿಗೆ ಶೇ.4.40ಕ್ಕೆ ಏರಿಕೆ ಮಾಡಲಾಗಿದೆ ಎಂದು ಬುಧವಾರ (ಮೇ 04) ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ್ದಾರೆ.
ಇದನ್ನೂ ಓದಿ:ನಾಳೆ ನಿಗದಿಯಾಗಿದ್ದ ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ಮುಂದೂಡಿಕೆ
ಮೇ 2ರಿಂದ 4ರವರೆಗೆ ಆರ್ ಬಿಐನ ಹಣಕಾಸು ನೀತಿ ಸಮಿತಿ ನಡೆಸಿದ್ದ ಸಭೆಯಲ್ಲಿ ರೆಪೋ ದರ ಏರಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಹಣದುಬ್ಬರ, ರಷ್ಯಾ, ಉಕ್ರೇನ್ ಯುದ್ಧ, ಕಚ್ಛಾ ತೈಲ ಬೆಲೆ ಏರಿಕೆಯ ಪರಿಣಾಮ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದು, ಈ ನಿಟ್ಟಿನಲ್ಲಿ ರೆಪೋ ದರ ಹೆಚ್ಚಳದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ದಾಸ್ ವಿವರಿಸಿದ್ದಾರೆ.
2020ರ ನಂತರ ಇದೇ ಮೊದಲ ಬಾರಿಗೆ ಆರ್ ಬಿಐ ರೆಪೋ ದರ ಹೆಚ್ಚಳ ಮಾಡುವ ಮೂಲಕ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಭಾರತ ತಾಳೆ ಎಣ್ಣೆ ಮತ್ತು ಸೋಯಾ ಎಣ್ಣೆ ಆಮದು ಮಾಡಿಕೊಳ್ಳುವ ವಿಶ್ವದ ಅತೀ ದೊಡ್ಡ ದೇಶವಾಗಿದೆ. ಪ್ರಸ್ತುತ ತಾಳೆಎಣ್ಣೆ ಮತ್ತು ಸೋಯಾ ಎಣ್ಣೆ ದರ ಭಾರೀ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.