ಕುಷ್ಟಗಿ: ತಾಲೂಕಿನ ತಾವರಗೇರಾಯ ರಾಯನಕೆರೆ ಇದೇ ಮೊದಲ ಬಾರಿಗೆ ಕೃತಿಕಾ ಮಳೆ ಮಳೆಗೆ ಭರ್ತಿಯಾಗಿದ್ದು, ಕೋಡಿಯ ಮೂಲಕ ಹೆಚ್ಚುವರಿ ನೀರು ಹರಿದಿದೆ. ಸಾರ್ವಜನಿಕರಲ್ಲಿ ಸಂತಸ ಮನೆ ಮಾಡಿದೆ.
ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ ರಾಯನಕೆರೆ ಕುಡಿಯುವ ನೀರಿನ ಮೂಲವು ಹೌದು, ಕೆರೆ ಭರ್ತಿಯಾದರೆ ಅಂತರ್ಜಲಕ್ಕೆ ಕೊರತೆಯಾಗದು. ಈ ಕೆರೆ ಜನ ಜಾನುವಾರುಗಳಿಗೆ ಆಸರೆಯಾಗಿದ್ದು ಕೆರೆ ಬರಿದಾದರೆ ಈ ಭಾಗದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತದೆ. ಈ ರೀತಿಯಾಗಿ ರಾಯನಕೆರೆಗೂ ತಾವರಗೇರಾ ಪಟ್ಟಣಕ್ಕೂ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ.
ಸಣ್ಣ ನೀರಾವರಿ ಇಲಾಖೆಯ ಆಧೀನದ ರಾಯನಕೆರೆ 21.04 ಹೆಕ್ಟೇರ್ ವಿಸ್ತೀರ್ಣ ದ 48 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕುಷ್ಟಗಿ ಯ ನಿಡಶೇಸಿ ಕೆರೆ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ದಿ ಮಾದರಿಯಲ್ಲಿ ರಾಯನಕೆರೆಯೂ ಅಭಿವೃದ್ಧಿ ಆಗಿರುವುದು ಗಮನಾರ್ಹ ವಾಗಿದೆ.
ಈ ಕೆರೆಯನ್ನು 2018- 19 ರಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೊಪ್ಪಳ ಗವಿಶ್ರೀ ಪ್ರೇರಣೆಯೊಂದಿಗೆ ಅಗಿನ ಪಿಎಸೈ ಶಿವರಾಜ್ ಸಜ್ಜನ್ ಸಾರಥ್ಯದಲ್ಲಿ ಸಮಾನಮನಸ್ಕ ಯುವ ಪಡೆಯೊಂದಿಗೆ ಈ ಕೆರೆಯ ಹೂಳು ಎತ್ತುವ ಕಾರ್ಯ ನಡೆದಿತ್ತು. ಈ ಕಾರ್ಯದಿಂದ ಕೆರೆಯ ನೀರಿನ ಸಾಮಾರ್ಥ್ಯ ಹೆಚ್ಚಿದೆ. ಕಳೆದ ವರ್ಷದಲ್ಲಿ ಕೆರೆ ಭರ್ತಿಯಾಗಿದ್ದ ಕೆರೆ ಈ ವರ್ಷವೂ ಮುಂಗಾರು ಹಂಗಾಮಿನಲ್ಲಿ ಭರ್ತಿಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೃತಿಕಾ ಕೃಪೆಯಿಂದ ಶುಕ್ರವಾರ ಕೆರೆ ತುಂಬಿ ಹರಿದಿದ್ದು ತಾವರಗೇರಾ ಜನತೆಯ ಸಂತಸಕ್ಕೆ ಕಾರಣವಾಗಿದೆ. ಈ ಸಂತಸದ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಸಮರ್ಪಿಸಲು ಮುಂದಾಗಿದ್ದಾರೆ.
–ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)