ನಟ ಸುದೀಪ್ ಮತ್ತು ನಿರ್ಮಾಪಕ ಎಂ. ಎನ್. ಕುಮಾರ್ ನಡುವಿನ ವಿವಾದ ಒಂದೆಡೆ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಮತ್ತೂಂದೆಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಸುದೀಪ್ ಸಂಧಾನ ಮಾಡಿಕೊಳ್ಳಲು ಮುಂದಾಗಬೇಕು ಎಂದು ಪಟ್ಟು ಹಿಡಿದು ಧರಣಿ ಕೂತಿರುವ ನಿರ್ಮಾಪಕ ಎಂ. ಎನ್. ಕುಮಾರ್ ಅವರಿಗೆ ಹಲವು ನಿರ್ಮಾಪಕರು ಸಾಥ್ ನೀಡಿದ್ದಾರೆ. ಮತ್ತೂಂದೆಡೆ ಸುಮಾರು 20ಕ್ಕೂ ಹೆಚ್ಚು ನಿರ್ಮಾಪಕರು ಮಂಗಳವಾರ ನಟ ರವಿಚಂದ್ರನ್ ಅವರನ್ನು ಭೇಟಿ ಮಾಡಿ, ಈ ಬೆಳವಣಿಗೆಗಳ ಬಗ್ಗೆ ಮಾತುಕಥೆ ನಡೆಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ರವಿಚಂದ್ರನ್ ಅವರನ್ನು ಭೇಟಿ ಮಾಡಿದ ನಿರ್ಮಾಪಕರ ತಂಡ, ಸುದೀಪ್ ಮತ್ತು ಎಂ. ಎನ್ ಕುಮಾರ್ ನಡುವಿನ ಮನಸ್ತಾಪ, ಅದರಿಂದಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿತು.
ನಿರ್ಮಾಪಕರ ಜೊತೆಗಿನ ಮಾತುಕಥೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟ ರವಿಚಂದ್ರನ್, “ಪರಿಸ್ಥಿತಿ ಸರಿಯಿಲ್ಲ ಅಂದ್ರೆ, ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ನಾನು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಸುದೀಪ್‌ಗೆ ನೋವಾಗಿರೋದು ನಿಜ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು’ ಎಂದರು.
“ಸುದೀಪ್ ಹತ್ತಿರ ಈ ಬಗ್ಗೆ ಮಾತನಾಡಬೇಕಾ? ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ-ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ. ಆದ್ರೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೆಲವು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ’ ಎಂದು ಬೇಸರ ಪಟ್ಟುಕೊಂಡರು.
“ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲ್ಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿ ಕೊಟ್ಟಿದ್ದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ. ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್ ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ.. 2 ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್‌ಗೆ ಬಿಡೋಕೆ ಹೇಳಿ. ಸುದೀಪ್‌ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್‌ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್‌ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ’ ಎಂದಿದ್ದಾರೆ ರವಿಚಂದ್ರನ್.