ಬೀಜಿಂಗ್/ನವದೆಹಲಿ: ಕಮ್ಯೂನಿಷ್ಟ್ ರಾಷ್ಟ್ರ ಭಾರತಕ್ಕೆ ಕಳುಹಿಸಿದ್ದ ಕೋವಿಡ್ ಪರೀಕ್ಷಾ ಕಿಟ್ ಗಳಲ್ಲಿ ದೋಷ ಇದ್ದಿರುವುದಾಗಿ ಹಲವು ರಾಜ್ಯಗಳು ದೂರಿದ್ದವು. ಇದೀಗ ಭಾರತದ ವಿರುದ್ಧ ತಿರುಗಿಬಿದ್ದಿರುವ ಚೀನಾ, ನಮ್ಮ ಪರೀಕ್ಷಾ ಕಿಟ್ ಗಳಲ್ಲಿ ಯಾವುದೇ ದೋಷ ಇಲ್ಲ ಆದರೆ ಅದನ್ನು ಬಳಸುವ ವಿಧಾನ ಭಾರತದ ಆರೋಗ್ಯ ಕಾರ್ಯಕರ್ತರ ಸರಿಯಾಗಿ ತಿಳಿದಿಲ್ಲ ಎಂದು ಆರೋಪಿಸಿದೆ.
ಭಾರತ ಚೀನಾದ ವೋಂಡ್ ಫೋ ಬಯೋಟೆಕ್ ಮತ್ತು ಲಿವ್ ಝೋನ್ ಡಯಾಗ್ನೋಸ್ಟಿಕ್ ಎಂಬ ಎರಡು ಕಂಪನಿಗಳಿಂದ ಐದು ಲಕ್ಷ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್ಸ್ ಗಳನ್ನು ಆಮದು ಮಾಡಿಕೊಂಡಿತ್ತು. ಬಳಿಕ ಕೋವಿಡ್ 19 ವೈರಸ್ ವರದಿಯಾಗಿದ್ದ ಹಲವು ರಾಜ್ಯಗಳಿಗೆ ಭಾರತ ಈ ಕಿಟ್ಸ್ ಗಳನ್ನು ಹಂಚಿತ್ತು. ಆದರೆ ಈ ಕಿಟ್ಸ್ ಗಳು ಅಸಮರ್ಪಕ ಫಲಿತಾಂಶ ನೀಡಿರುವುದಾಗಿ ರಾಜಸ್ಥಾನ ಮತ್ತು ಪಶ್ಚಿಮಬಂಗಾಳ ರಾಜ್ಯಗಳು ಆರೋಪಿಸಿದ್ದವು.
ರಾಪಿಡ್ ಟೆಸ್ಟಿಂಗ್ ಕಿಸ್ಟ್ ಗಳ ಬಗ್ಗೆ ವಿವಾದ ಭುಗಿಲೇಳುತ್ತಿದ್ದಂತೆಯೇ ಈ ಪ್ರತಿಕ್ರಿಯೆ ನೀಡಿರುವ ಚೀನಾದ ಎರಡು ಕಂಪನಿಗಳು, ನಮ್ಮ ಕಿಟ್ಸ್ ಸರಿಯಾಗಿದೆ. ನಾವು ಅದನ್ನು ಜಾಗತಿಕವಾಗಿ ಎಲ್ಲಾ ಕಡೆ ರಫ್ತು ಮಾಡಿದ್ದೇವೆ. ನಾವು ನಿಮಗೆ ನೀಡುವ ಸಲಹೆ ಏನೆಂದರೆ ಟೆಸ್ಟಿಂಗ್ ಕಿಟ್ಸ್ ಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ಬಳಕೆದಾರರ ಕೈಪಿಡಿಯಲ್ಲಿರುವ ಮಾಹಿತಿಯನ್ನು ಆರೋಗ್ಯ ಕಾರ್ಯಕರ್ತರು ಅನುಸರಿಸಲಿ ಎಂದು ಸಮಜಾಯಿಷಿ ನೀಡಿದೆ ಎಂದು ವರದಿ ವಿವರಿಸಿದೆ.
ಕೋವಿಡ್ 19 ವಿಚಾರದಲ್ಲಿ ಸುಳ್ಳುಗಳ ಸರಮಾಲೆಯನ್ನೇ ಹೆಣೆಯುತ್ತ ಬಂದಿರುವ ಕಮ್ಯೂನಿಷ್ಟ್ ರಾಷ್ಟ್ರ ಚೀನಾ ಈಗ ಭಾರತವೂ ಸೇರಿದಂತೆ ವಿದೇಶಗಳಿಗೆ ಕಳಪೆ ಕೋವಿಡ್ 19 ವೈರಸ್ ಪರೀಕ್ಷಾ ಕಿಟ್ ಗಳನ್ನು ಕಳುಹಿಸಿ ಸಮಸ್ಯೆ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಚೀನಾ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಅಮೆರಿಕ, ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದು, ವೈದ್ಯರಿಗೆ ಅಗತ್ಯವಾದ ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ)ಗಳು ಮತ್ತು ಮಾಸ್ಕ್ ಗಳನ್ನು ಚೀನಾ ಸರ್ಕಾರ ಕಳ್ಳ ದಾಸ್ತಾನು ಮಾಡಿಟ್ಟುಕೊಂಡು ಈಗ ಅತ್ಯಧಿಕ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ದೂರಿದ್ದನ್ನು ನೆನಪಿಸಿಕೊಳ್ಳಬಹುದು.