Advertisement

ಆರ್ಯಭಟನಿಂದ ಆದಿತ್ಯನವರೆಗೆ ರಾವ್‌ ಹೆಜ್ಜೆ

02:12 AM Jul 25, 2017 | |

ಸರಿಯಾಗಿ ಕ್ರಿಕೆಟ್‌ ಮೈದಾನದಲ್ಲೇ ಗೆಲ್ಲಲಾರದ ಇವರು, ವಿಜ್ಞಾನ ಕ್ಷೇತ್ರದಲ್ಲಿ ಗೆಲ್ತಾರಾ?

Advertisement

ಇಂಥದ್ದೊಂದು ಮಾತು ಚಾಲ್ತಿಯಲ್ಲಿರುವಾಗಲೇ ಭಾರತ ಬಾಹ್ಯಾಕಾಶ ನೋಡುವ ಪ್ರಯತ್ನದಲ್ಲಿತ್ತು. 1975ರಲ್ಲಿ ಆರ್ಯಭಟ ಅಂತರಿಕ್ಷಕ್ಕೆ ಏರಿದಾಗ, ಪಶ್ಚಿಮದ ವಿಜ್ಞಾನ ಮಂದಿರಗಳಲ್ಲಿ ಕುಳಿತಿದ್ದವರಿಗೆ ಮನದೊಳಗೇ ಸಣ್ಣ ಈಷ್ಯೆì ಮೂಡತೊಡಗಿತ್ತು. ಹೌದು, ಆರ್ಯಭಟದಿಂದ ಆದಿತ್ಯನವರೆಗೆ ಭಾರತದ ಬಾಹ್ಯಾಕಾಶ ಕ್ಷೇತ್ರ ಮಾಡಿರುವ ಸಾಧನೆ ಅಪಾರ. ಇದರಲ್ಲಿ ಹೆಚ್ಚುಕಡಿಮೆ ಎಲ್ಲವೂ ಕರ್ನಾಟಕದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಉಡುಪಿ ರಾಮಚಂದ್ರರಾವ್‌ ಅವರ ಕಣ್ಣು ಮುಂದೆ ಅಥವಾ ಅವರ ಅಡಿಯಲ್ಲೇ ಆಗಿದ್ದು ಎಂದರೆ ಅತಿಶಯೋಕ್ತಿಯೇನಲ್ಲ. 

1975: ಇಡೀ ಜಗತ್ತು ತಲೆ ಎತ್ತಿ ಆಕಾಶಕ್ಕೆ ನೋಡಿ ಆಗಿನ್ನೂ 18 ವರ್ಷಗಳಷ್ಟೇ ಆಗಿದ್ದವು. ಆರಂಭದಲ್ಲೇ ಕ್ರಿಕೆಟ್‌ ಪ್ರಸ್ತಾಪಿಸಿದ್ದೂ ಇದಕ್ಕೇ. ಆಗ ಭಾರತ ತಂಡ ಕ್ರಿಕೆಟ್‌ ಆಡುತ್ತಿದ್ದರೂ, ಹೆಚ್ಚು ಕಡಿಮೆ ಸೋತು ವಾಪಸ್‌ ಬರುತ್ತಿತ್ತು. ಇಂಥ ವೇಳೆಯಲ್ಲೇ  ಅಂದರೆ, 1962ರಲ್ಲಿ ಆಗಿನ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರು ಅವರು, ಬಾಹ್ಯಾಕಾಶ ಸಂಶೋಧನೆಗಾಗಿ ಭಾರತ ರಾಷ್ಟ್ರೀಯ ಸಮಿತಿ(ಐಎನ್‌ಸಿಒಎಸ್‌ಪಿಎಆರ್‌) ಸ್ಥಾಪಿಸಿದರು. ಇದರ ಉಸ್ತುವಾರಿ ಹೊತ್ತಿದ್ದವರು ಯು.ಆರ್‌. ರಾವ್‌ ಅವರ ಡಾಕ್ಟರೇಟ್‌ ಮಾರ್ಗದರ್ಶಿ ವಿಕ್ರಂ ಸಾರಾಭಾಯಿ ಅವರು. ಆದರೆ, ರಾವ್‌ ಆಗಿನ ಈ ಸ್ಥಾಪಕ ಸಮಿತಿಯಲ್ಲಿ ಸದಸ್ಯರಾಗಿರಲಿಲ್ಲ. ವಿಕ್ರಂ ಸಾರಾಭಾಯಿ ಅವರ ಜತೆಗೆ ಕೆಲಸ ಮಾಡುತ್ತಿದ್ದ ಕಾರಣ, ಹಲವಾರು ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಕ್ಕಿತ್ತು. ತಲೆ ಎತ್ತಿ ಅಂತರಿಕ್ಷದಲ್ಲಿ ತಮ್ಮ ಸಾಧನೆಯ ಬರವಣಿಗೆಯನ್ನು ನೋಡುತ್ತಿದ್ದ ಅಮೆರಿಕ ಮತ್ತು ಯುಎಸ್‌ಎಸ್‌ಆರ್‌ಗಳು ತಲೆ ತಗ್ಗಿಸಿ ಭಾರತದತ್ತ ನೋಡುವ ಕಾಲ ಬಂದಿತ್ತು. 1975ರಲ್ಲಿ ಭಾರತ ದೇಶದ ಮೊಟ್ಟ ಮೊದಲ ಆರ್ಯಭಟ ಉಪಗ್ರಹವನ್ನು ಗಗನಕ್ಕೆ ತಲುಪಿಸಿ ಎದೆಯುಬ್ಬಿಸಿ ನಿಂತು, ಕ್ರಿಕೆಟ್‌ನಲ್ಲಿ ಗೆಲ್ಲಲಾಗದಿದ್ದರೆ ಪರವಾಗಿಲ್ಲ, ತಲೆ ಎತ್ತಿ ನೋಡುವ ಅವಕಾಶವನ್ನಂತು ಸೃಷ್ಟಿ ಮಾಡಿಕೊಂಡಿದ್ದೇವೆ ಎಂಬುದನ್ನು ಸಾರಿ ಹೇಳಿತು. 

1984: ಆರ್ಯಭಟದಲ್ಲಿ ಗೆದ್ದಾಗಿತ್ತು, ಅಷ್ಟರೊಳಗೇ ಯು.ಆರ್‌. ರಾವ್‌ ಅವರೂ ಸಾಕಷ್ಟು ಹೆಸರು ಮಾಡಿದ್ದರು. 1970(ವಿಕ್ರಂ ಸಾರಾಭಾಯಿ ಅವರ ನಿಧನಕ್ಕೆ ಒಂದು ವರ್ಷ ಮುನ್ನ)ರಲ್ಲಿ ಭಾರತದ ಮೊದಲ ಉಪಗ್ರಹ ಉಡಾವಣೆ ವಾಹಕ ಎಸ್‌ಎಲ್‌ವಿ-3ಯ ನೀಲ ನಕ್ಷೆ ತಯಾರಾಯಿತು. 1974ರ ಹೊತ್ತಿಗೆ ಈ ವಾಹಕ ಸಿದ್ಧವಾಗಲೇಬೇಕು ಎಂದ ಸಾರಾಭಾಯಿ ಅವರು ಡೆಡ್‌ಲೈನ್‌ ಕೂಡ ಹಾಕಿದ್ದರು. ಇವರು ವಿಕ್ರಂ ಸಾರಾಭಾಯಿ ಅವರು 1974ರಲ್ಲಿ ಶ್ರೀಹರಿಕೋಟದಿಂದ ಈ ವಾಹಕ ಉಡಾವಣೆಯಾಗಲೇಬೇಕು ಎಂಬ ಗಡುವು ನೀಡಿದ್ದರು. ಆದರೆ ಇದು ಪೂರ್ಣವಾಗಿ ಸಿದ್ಧವಾಗಿದ್ದು 1979ರಲ್ಲಿ. ಇದರ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತಾದರೂ ಭಾಗಶಃ ವೈಫ‌ಲ್ಯವಾಯಿತು. 1980ರಲ್ಲಿ ಆರ್‌ಎಸ್‌-1 ಅನ್ನು ಹೊತ್ತಿದ್ದ ಪರೀಕ್ಷಾರ್ಥ ಉಪಗ್ರಹ ಮತ್ತು ಎರಡು ಅಭಿವೃದ್ಧಿ ಕೇಂದ್ರಿತ ವಾಹಕಗಳು ಯಶಸ್ವಿಯಾದವು. ಅಷ್ಟೊತ್ತಿಗೆ ಭಾರತದಲ್ಲಿ ಇಸ್ರೋ ಜನ್ಮತಾಳಿತ್ತು. 1980ರಲ್ಲಿ ಕಂಡ ಸಾಫ‌ಲ್ಯ, ಭಾರತದ ವಿಜ್ಞಾನಿಗಳಲ್ಲಿ ಹೊಸ ಭರವಸೆಗಳೇ ಮೂಡಲು ಕಾರಣವಾಗಿತ್ತು. ಆಗ ಸತೀಶ್‌ ಧವನ್‌ ಇಸ್ರೋದ ಮುಖ್ಯಸ್ಥರಾಗಿದ್ದರು. ಇವರು ಅಮೆರಿಕದ ಸಹಾಯದೊಂದಿಗೆ 1982ರ ಏಪ್ರಿಲ್‌ನಲ್ಲಿ ಇನ್‌ಸ್ಯಾಟ್‌-1ಎ ಎಂಬ ಕಮ್ಯೂನಿಕೇಶನ್‌ ಸ್ಯಾಟ್‌ಲೆಟ್‌ ಅನ್ನು ಉಡಾವಣೆ ಮಾಡಲಾಯಿತು. 1983ರ ಆಗಸ್ಟ್‌ನಲ್ಲಿ ಇನ್‌ಸ್ಯಾಟ್‌-1ಬಿ ಮತ್ತ 1988ರಲ್ಲಿ ಇನ್‌ಸ್ಯಾಟ್‌-1ಸಿಯನ್ನು ಯಶಸ್ವಿಯಾಗಿ ಉಡ್ಡಯನಗೊಳಿಸಲಾಯಿತು. 

1984ರಲ್ಲಿ ಸತೀಶ್‌ ಧವನ್‌ರಿಂದ ಇಸ್ರೋದ ಮುಖ್ಯಸ್ಥ ಸ್ಥಾನ ವಹಿಸಿಕೊಂಡ ಯು.ಆರ್‌. ರಾವ್‌ ಅವರು, ಎಎಸ್‌ಎಲ್‌ವಿ, ಐಆರ್‌ಎಸ್‌, ಇನ್‌ಸ್ಯಾಟ್‌ 2, ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ ರಾಕೆಟ್‌ಗಳ ಸೃಷ್ಟಿಗೆ ಕಾರಣರಾದರು. ಇದಷ್ಟೇ ಅಲ್ಲ, 1988ರಲ್ಲಿ ಭಾರತದ ಮೊದಲ ಗಗನಯಾತ್ರಿ ರಾಕೇಶ್‌ ಶರ್ಮಾ ಅವರು ಅಂತರಿಕ್ಷಕ್ಕೆ ಹಾರಿದ ಗಳಿಗೆಗೂ ಸಾಕ್ಷಿಯಾದರು. ಸೋವಿಯತ್‌ ಯೂನಿಯನ್‌, ಕಜಕಿಸ್ತಾನದ ಬೈಕೋನೂರ್‌ನಲ್ಲಿ ಈ ಮಾನವ ಸಹಿತ ರಾಕೆಟ್‌ ಅನ್ನು ಉಡಾವಣೆ ಮಾಡಿತು. 

Advertisement

ಎಸ್‌ಎಲ್‌ವಿಯ ಮುಂದುವರಿದ ಭಾಗವಾಗಿ ಎಎಸ್‌ಎಲ್‌ವಿಯ ಎರಡು ಅಭಿವೃದ್ಧಿ ವಾಹಕಗಳು ಫೇಲ್‌ ಆದಾಗ, ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ “”ನಾನು ಈ ವೈಫ‌ಲ್ಯಕ್ಕೆ ಪ್ರಶ್ಚಾತ್ತಾಪ ಪಡುವುದಿಲ್ಲ. ಆದರೆ ಈ ವೈಫ‌ಲ್ಯಕ್ಕೆ ಸಂಪೂರ್ಣವಾಗಿ ನಾನೇ ಹೊಣೆ ಹೊರುತ್ತೇನೆ” ಎಂದು ಹೇಳುವ ಮೂಲಕ ಇಸ್ರೋ ವಿಜ್ಞಾನಿಗಳ ಆತ್ಮವಿಶ್ವಾಸ ಕುಂದದಂತೆ ನೋಡಿಕೊಂಡಿದ್ದರು. ವಿಶೇಷವೆಂದರೆ, 1992ರಲ್ಲಿ ಉಡಾವಣೆ ಮಾಡಲಾದ ಎಎಸ್‌ಎಲ್‌ವಿ -ಡಿ3 ಸಂಪೂರ್ಣವಾಗಿ ಯಶಸ್ವಿಯಾಯಿತು. 1988 ರಿಂದ 1995ರ ಅವಧಿಯೊಳಗೆ ಇಸ್ರೋ ಫ‌ಸ್ಟ್‌ ಜನರೇಶನ್‌ನ ಐಆರ್‌ಎಸ್‌-ರಿಮೋಟ್‌ ಸೆನ್ಸಿಂಗ್‌ ಸ್ಯಾಟ್‌ಲೆçಟ್‌ ಅನ್ನು ಉಡಾವಣೆ ಮಾಡಿತು. ಇದರ ವಿಶೇಷವೇನು ಗೊತ್ತಾ? ಈಗ ನಾವು ಹವಾಮಾನ ಸೇರಿದಂತೆ ಭೂಕಂಪ, ಚಂಡಮಾರುತಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿ ಪಡೆಯುತ್ತಿರುವುದು ಇವೇ ಉಪಗ್ರಹಗಳ ಸಹಾಯದಿಂದ. 1994ರ ಅಕ್ಟೋಬರ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಐಆರ್‌ಎಸ್‌ -ಪಿ2 ಉಪಗ್ರಹವನ್ನು ಉಡಾಯಿಸಲಾಯಿತು. ಇದೀಗ ಇದೇ ಪಿಎಸ್‌ಎಲ್‌ವಿ ರಾಕೆಟ್‌ ಇಸ್ರೋಗೆ ಒಂದರ ಮೇಲೊಂದು ಯಶಸ್ಸಿನ ಮೆಟ್ಟಿಲುಗಳನ್ನು ಜೋಡಿಸುತ್ತಾ ಸಾಗಿದೆ. 

ಇದಷ್ಟೇ ಅಲ್ಲ, ಇನ್‌ಸ್ಯಾಟ್‌ 2 ಸರಣಿಯ ಉಪಗ್ರಹಗಳು 2000 ಕೆಜಿಗಿಂತಲೂ ಭಾರವಾಗಿದ್ದವು. ಆದರೆ ಪಿಎಸ್‌ಎಲ್‌ವಿ ರಾಕೆಟ್‌ಗಳು ಈ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿರಲಿಲ್ಲ. ಹೀಗಾಗಿ ಭಾರತದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹೊಸ ಆಲೋಚನೆಗೆ ಕೈಹಾಕಲಾಯಿತು. ಇದರ ಫ‌ಲವೇ ಜಿಎಸ್‌ಎಲ್‌ವಿ ಸರಣಿಯ ರಾಕೆಟ್‌ಗಳು. ಇದು ಸ್ವದೇಶಿ ನಿರ್ಮಿತ ಎಂಜಿನ್‌ ಹೊಂದಿದ ರಾಕೆಟ್‌ ಆಗಿದ್ದು, ಇದಕ್ಕಾಗಿ ರಷ್ಯಾ ಜತೆ 750 ಕೋಟಿ ರೂ.ಗಳ ಒಪ್ಪಂದವನ್ನೂ ಮಾಡಿಕೊಳ್ಳಲಾಯಿತು. ಇದರ ಪ್ರಕಾರ, ಮೊದಲ ಎರಡು ಜಿಎಸ್‌ಎಲ್‌ವಿ ರಾಕೆಟ್‌ಗಳಿಗೆ ರಷ್ಯಾದ ಸಿ2 ಎಂಜಿನ್‌ ಮತ್ತು ಮೂರನೇ ರಾಕೆಟ್‌ಗೆ ಅಲ್ಲಿನ ತಾಂತ್ರಿಕತೆಯೊಂದಿಗೆ ಸ್ವದೇಶಿಯಾಗಿ ರಚಿತವಾದ ಎಂಜಿನ್‌ ಬಳಕೆಗೆ ಒಪ್ಪಿಕೊಳ್ಳಲಾಯಿತು. ಇದಕ್ಕೆ 1997ರ ಗಡುವನ್ನೂ ಹಾಕಿಕೊಳ್ಳಲಾಗಿತ್ತು.

ಇದರ ನಡುವೆಯೇ 1993ರಲ್ಲಿ ಅಮೆರಿಕ ಭಾರತದ ಅಂತರಿಕ್ಷ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡಿತು. ಈ ಬಗ್ಗೆ ಅಮೆರಿಕಕ್ಕೆ ಹೋಗಿದ್ದ ರಾವ್‌ ಅವರು ಆಗಿನ ಉಪಾಧ್ಯಕ್ಷ ಅಲ್‌ ಗೋರೆ ಅವರನ್ನು ಭೇಟಿ ಮಾಡಿ, ಯೋಜನೆಯ ಉದ್ದೇಶ ಹೇಳಿಬಂದಿದ್ದರು. ಆದರೆ ಅಷ್ಟು ಹೊತ್ತಿಗೆ ರಷ್ಯಾ ಅಮೆರಿಕದ ದಿಗ್ಬಂಧನದ ಭಯದಿಂದ ಭಾರತಕ್ಕೆ ನೀಡುತ್ತಿದ್ದ ನೆರವನ್ನು ನಿಲ್ಲಿಸಿತ್ತು. ಹೀಗಾಗಿ ಸ್ವದೇಶಿ ನಿರ್ಮಿತವಾಗಿ ಬಾಹ್ಯಾಕಾಶ ಸೇರಬೇಕಿದ್ದ ರಾಕೆಟ್‌ ಸರಿಯಾದ ಸಮಯಕ್ಕೆ ಸೇರಲಿಲ್ಲ. ಆದರೆ, ಈ ಕನಸು ಈಡೇರಿದ್ದು 2017ರ ಜೂ.5 ರಂದು. ಭಾರತ ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಬಳಸಿ ಜಿಎಸ್‌ಎಲ್‌ವಿ ಎಂಕೆ 3 ಅನ್ನು ಉಡಾವಣೆ ಮಾಡಿತು. ಅಲ್ಲಿಗೆ ರಾವ್‌ ಅವರ ಕನಸಾಗಿಯೇ ಉಳಿದಿದ್ದನ್ನು ಇಸ್ರೋ ನನಸು ಮಾಡಿತ್ತು. 

ರಾವ್‌ ಅವರ ಬಾಲ್ಯ
ಕರ್ನಾಟಕದ ಕರಾವಳಿ ಭಾಗದಲ್ಲಿರುವ ಉಡುಪಿಯ ಅದಮಾರುವಿನಲ್ಲಿ 1932ರ ಮಾರ್ಚ್‌ 10 ರಂದು ಜನಿಸಿದ ರಾವ್‌ ಅವರು, ಲಕ್ಷ್ಮಿನಾರಾಯಣ ಆಚಾರ್ಯ ಮತ್ತು ಕೃಷ್ಣವೇಣಿ ಅಮ್ಮ ದಂಪತಿಯ ಮುದ್ದಿನ ಕೂಸು. ಆರಂಭದ ಓದು ಉಡುಪಿಯ ಕ್ರಿಶ್ಚಿಯನ್‌ ಶಾಲೆಯಲ್ಲಾದರೆ, ಆರಂಭಿಕ ಕಾಲೇಜು ವಿದ್ಯಾಭ್ಯಾಸ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಆಯಿತು. ಮದ್ರಾಸ್‌ ವಿಶ್ವವಿದ್ಯಾನಿಲಯದ ಅಡಿಯಲ್ಲಿದ್ದ ಅನಂತಪುರದಲ್ಲಿ ಬಿಎಸ್ಸಿ ಮುಗಿಸಿ ವಾರಣಾಸಿಯ ಬನಾರಸ್‌ ಹಿಂದೂ ವಿವಿಯಲ್ಲಿ ಎಂಎಸ್ಸಿ ಮುಗಿಸಿದರು.  ಸ್ನಾತಕೋತ್ತರ ಪದವಿ ಮುಗಿಸಿದ ರಾವ್‌ ಅವರು, ಮೊದಲಿಗೆ ಅಹ್ಮದಾನಗರ ಮತ್ತು ಮೈಸೂರಿನಲ್ಲಿ ಕೆಲಕಾಲ ಉಪನ್ಯಾಸಕರಾಗಿ ಕೆಲಸ ಮಾಡಿದರು. 1954ರಲ್ಲಿ ಅಹ್ಮದಾಬಾದ್‌ನಲ್ಲಿರುವ ಭೌತಶಾಸ್ತ್ರ ಸಂಶೋಧನಾ ಪ್ರಯೋಗಾಲಯದಲ್ಲಿ ಪಿಎಚ್‌ಡಿಗೆ ನೋಂದಣಿ ಮಾಡಿಸಿದರು. ವಿಶೇಷವೆಂದರೆ, ಇವರಿಗೆ ಗೈಡ್‌ ಆಗಿ ಸಿಕ್ಕಿದ್ದು ದೇಶದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ ಅವರು. 1960ರಲ್ಲಿ ರಾವ್‌ ಅವರು ಗುಜರಾತ್‌ ವಿವಿಯಿಂದ ಡಾಕ್ಟರೇಟ್‌ ಪಡೆದರು. ಆಗ, ವಿಶ್ವದ ಮೊದಲ ಸ್ಯಾಟ್‌ಲೆçಟ್‌ ಅನ್ನು 1957ರಲ್ಲಿ ಯುಎಸ್‌ಎಸ್‌ಆರ್‌(ಈಗಿನ ರಷ್ಯಾ) ಸ್ಪಟ್ನಿಕ್‌ ಅನ್ನು ಉಡಾವಣೆ ಮಾಡಿತು. ಇದಾದ ಮೂರು ವರ್ಷಗಳಲ್ಲೇ ಯುಎಸ್‌ಎ ಕೂಡ ಎಕ್ಸ್‌ಪ್ಲೋರರ್‌1 ಅನ್ನು ಅಂತರಿಕ್ಷಕ್ಕೆ ಕಳುಹಿಸಿತು.  ಡಾಕ್ಟರೇಟ್‌ ಮುಗಿಸಿ, ಅಮೆರಿಕಕ್ಕೆ ಹೋದ ರಾವ್‌ ಅವರು ಮ್ಯಾಸಸುಚೆಟ್ಸ್‌ ಇನ್ಸ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಎಂಐಟಿ) ಮತ್ತು ಡಲ್ಲಾಸ್‌ನಲ್ಲಿರುವ ಟೆಕ್ಸಾಸ್‌ ವಿವಿಯಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಆಗಲೇ ಇವರು, ತಮ್ಮ ಸಹೋದ್ಯೋಗಿ ಜತೆಗೂಡಿ ಬಾಹ್ಯಾಕಾಶ ಮತ್ತು ಸೂರ್ಯನಿಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ತೊಡಗಿದರು. 1966ರಲ್ಲಿ ಭಾರತಕ್ಕೆ ಬಂದ ಯು.ಆರ್‌.ರಾವ್‌ ಅವರು, ಅಹ್ಮದಾಬಾದ್‌ನಲ್ಲಿರುವ ಫಿಸಿಕ್ಸ್‌ ರಿಸರ್ಚ್‌ ಲ್ಯಾಬೋರೇಟರಿ ಮತ್ತು ಮೈಸೂರಿನಲ್ಲಿ ಕೆಲಸ ಮಾಡಿದರು. ಇದಾದ ಬಳಿಕ ಅವರು ವಿಕ್ರಂ ಸಾರಾಭಾಯಿ ಅವರ ಜತೆ ಸೇರಿಕೊಂಡು ಬಾಹ್ಯಾಕಾಶ ಕ್ಷೇತ್ರದ ಮೇಲೆ ಸಂಶೋಧನೆಯಲ್ಲಿ ನಿರತವಾದರು. 1994ರಲ್ಲಿ ಇಸ್ರೋ ಬಿಟ್ಟ ನಂತರವೂ ರಾವ್‌ ಸುಮ್ಮನೆ ಕೂರಲಿಲ್ಲ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಸೂರ್ಯನ ಅಧ್ಯಯನಕ್ಕಾಗಿ ತಯಾರಾಗುತ್ತಿರುವ ಆದಿತ್ಯದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕಿರಿಯ ವಿಜ್ಞಾನಿಗಳಿಗೆ ಸಹಾಯ ಮಾಡುತ್ತಾ, ಈ ಯೋಜನೆಗೆ ಶ್ರಮಿಸುತ್ತಿದ್ದರು. ಇದಷ್ಟೇ ಅಲ್ಲ ಭಾರತ ಚಂದ್ರಯಾನದ ಯಶಸ್ಸಿಗೂ ಇವರದ್ದೇ ಕನಸಾದ ಪಿಎಸ್‌ಎಲ್‌ವಿ ಕಾರಣವಾಗಿತ್ತು.  ಒಟ್ಟಾರೆಯಾಗಿ, ಇಸ್ರೋ ಬಿಟ್ಟು ಯು.ಆರ್‌. ರಾವ್‌ ಇಲ್ಲ, ಯು.ಆರ್‌. ರಾವ್‌ ಬಿಟ್ಟು ಇಸ್ರೋ ಇಲ್ಲ ಎಂಬಂತೆ ಬದುಕಿದ್ದವರು ಇವರು. 85 ವರ್ಷದಲ್ಲೂ ಇಸ್ರೋ ಕಚೇರಿಗೆ ಹೋಗಿ ಬೆಳಗ್ಗೆ 9 ಗಂಟೆಗೆ ಕುಳಿತು ಕೆಲಸ ಮಾಡುತ್ತಿದ್ದ ವಿಜ್ಞಾನಿ ಎಂದರೆ ಯು.ಆರ್‌. ರಾವ್‌. ಇವರೀಗ ನಮ್ಮೊಂದಿಗೆ ಇಲ್ಲ. ಅಂತರಿಕ್ಷದಲ್ಲೇ ನಕ್ಷತ್ರವಾಗಿ ಸೇರಿದ್ದಾರೆ. 

ಉತ್ಸಾಹವಿರಬೇಕು ಬದುಕಲ್ಲಿ
ವಿದ್ಯಾರ್ಥಿಗಳೊಂದಿಗೆ ಒಡನಾಡುವುದನ್ನು ಪ್ರೊ. ರಾವ್‌ ಬಯಸುತ್ತಿದ್ದರು. ಒಮ್ಮೆ ವಿದ್ಯಾರ್ಥಿಯೊಬ್ಬ “”ಖಗೋಳವಿಜ್ಞಾನಿಯಾಗಿ ನಿಮಗೆ ಅತ್ಯಂತ ಸಂತಸ ಕೊಟ್ಟ ಘಟನೆ ಯಾವುದು?” ಎಂಬ ಪ್ರಶ್ನೆ ಎದುರಿಟ್ಟ. ಆಗ ರಾವ್‌, “”ಎರಡೂವರೆ ವರ್ಷ ಬೆಂಗಳೂರಿನ ಶೆಡ್‌ ಒಂದರಲ್ಲಿ(ಪೀಣ್ಯ) ಆರ್ಯಭಟ ಉಪಗ್ರಹವನ್ನು ನಿರ್ಮಿಸಿದ್ದು ಮತ್ತು ಅದು ಯುಎಸ್‌ಎಸ್‌ಆರ್‌ನಿಂದ ಯಶಸ್ವಿಯಾಗಿ ನಭಕ್ಕೇರಿದ್ದು” ಎಂದುತ್ತರಿಸಿದ್ದರು. ಮುಂದುವರಿದು “”ಈ ಯೋಜನೆಯಲ್ಲಿ ಪಾಲ್ಗೊಂಡವರೆಲ್ಲರೂ ತುಂಬಾ ಉತ್ಸುಕತೆ ಮನೆ ಮಾಡಿತ್ತು. ಜೀವನದಲ್ಲಿ ಉತ್ಸಾಹವಿರದಿದ್ದರೆ ಏನನ್ನೂ ಸಾಧಿಸಲಾಗದು” ಎಂದು ಮಕ್ಕಳಲ್ಲಿ ಪ್ರೇರಣೆ ತುಂಬಿದ್ದರು. 

ಸೋಮಶೇಖರ ಸಿ ಜೆ

Advertisement

Udayavani is now on Telegram. Click here to join our channel and stay updated with the latest news.

Next