Advertisement

ರಣಜಿ ಟ್ರೋಫಿ: ಇಂದು ರಾಜ್ಯಕ್ಕೆ ದಿಲ್ಲಿ ಎದುರಾಳಿ

07:30 AM Nov 09, 2017 | Team Udayavani |

ಬೆಂಗಳೂರು: ಪ್ರಸಕ್ತ ರಣಜಿ ಟ್ರೋಫಿ ಋತುವಿನಲ್ಲಿ ಸತತ ಮೂರು ಪಂದ್ಯದಲ್ಲಿ ಗೆದ್ದು “ಎ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಕರ್ನಾಟಕ ಗುರುವಾರದಿಂದ ಆರಂಭವಾಗಲಿರುವ ನಾಲ್ಕನೇ ಪಂದ್ಯದಲ್ಲಿ ದಿಲ್ಲಿ ತಂಡದ ಸವಾಲನ್ನು ಎದುರಿಸಲಿದೆ.

Advertisement

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮುಖಾಮುಖೀ ಭಾರೀ ಕುತೂಹಲ ಕೆರಳಿಸಿದೆ. ಕಾರಣ ಎರಡೂ ತಂಡಗಳು ತಾರಾ ಆಟಗಾರರನ್ನು ಹೊಂದಿದ್ದು, ಬಲಿಷ್ಠವಾಗಿದೆ. ಕರ್ನಾಟಕ ತಂಡ ಅಸ್ಸಾಂ ವಿರುದ್ಧ ಇನ್ನಿಂಗ್ಸ್‌ ಮತ್ತು 121 ರನ್‌ ಜಯ, ಹೈದರಾಬಾದ್‌ ವಿರುದ್ಧ 59 ರನ್‌ ಜಯ ಮತ್ತು ಮಹಾರಾಷ್ಟ್ರ ವಿರುದ್ಧ ಇನ್ನಿಂಗ್ಸ್‌ ಮತ್ತು 136 ರನ್‌ ಗೆಲುವು ಸಾಧಿಸಿದೆ. ಈ ಮೂಲಕ 20 ಅಂಕ ಸಂಪಾದಿಸಿ “ಎ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.

ಅದೇ ರೀತಿ ದಿಲ್ಲಿ ತಂಡ ರೈಲ್ವೇಸ್‌ ವಿರುದ್ಧ ಇನ್ನಿಂಗ್ಸ್‌ ಮತ್ತು 105 ರನ್‌ ಜಯ, ಉತ್ತರ ಪ್ರದೇಶ ವಿರುದ್ಧ 4 ವಿಕೆಟ್‌ ಜಯ ಮತ್ತು ಅಸ್ಸಾಂ ವಿರುದ್ಧ ಡ್ರಾ ಮಾಡಿಕೊಂಡಿದೆ. ಈ ಮೂಲಕ ಮೂರು ಪಂದ್ಯದಿಂದ 16 ಅಂಕ ಸಂಪಾದಿಸಿ “ಎ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.

ಕರ್ನಾಟಕ ಸಮತೋಲಿತ ತಂಡ: ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಕರ್ನಾಟಕ ತಂಡ ಬಲಿಷ್ಠವಾಗಿರುವುದರಿಂದ ಸಮತೋಲಿತವಾಗಿದೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಮಾಯಾಂಕ್‌ ಅಗರ್ವಾಲ್‌ ಮಹಾರಾಷ್ಟ್ರ ವಿರುದ್ಧ ತ್ರಿಶತಕ ದಾಖಲಿಸಿ ಪ್ರಚಂಡ ಫಾರ್ಮ್ನಲ್ಲಿರುವುದನ್ನು ಸಾಬೀತು ಪಡಿಸಿದ್ದಾರೆ. ಮಾಯಾಂಕ್‌ ಮೂರು ಪಂದ್ಯದಿಂದ 335 ರನ್‌ ದಾಖಲಿಸಿದ್ದಾರೆ. ಇದು ರಾಜ್ಯ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಉಳಿದಂತೆ ಆರ್‌.ಸಮರ್ಥ್ (300 ರನ್‌), ಕರುಣ್‌ ನಾಯರ್‌ (273 ರನ್‌) ಕೂಡ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ.

ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಕೆ.ಗೌತಮ್‌ (14 ವಿಕೆಟ್‌), ವೇಗಿ ವಿನಯ್‌ ಕುಮಾರ್‌ (13 ವಿಕೆಟ್‌), ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ (12 ವಿಕೆಟ್‌) ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದಾರೆ. ಇದು ತಂಡದ ಶಕ್ತಿಯಾಗಿದೆ.

Advertisement

ರಾಹುಲ್‌, ಮನೀಷ್‌ ವಾಪಸ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಆಗಿರುವ ಕಾರಣ ಕೆ.ಎಲ್‌.ರಾಹುಲ್‌ ಮತ್ತು ಮನೀಷ್‌ ಪಾಂಡೆ ಕಳೆದ ಮೂರು ಪಂದ್ಯಕ್ಕೂ ಲಭ್ಯ ಆಗಿರಲಿಲ್ಲ. ಆದರೆ ಇದೀಗ ನ್ಯೂಜಿಲ್ಯಾಂಡ್‌ ವಿರುದ್ಧ ಸರಣಿ ಅಂತ್ಯಗೊಂಡಿದೆ. ಇದರಿಂದಾಗಿ ರಾಹುಲ್‌ ಮತ್ತು ಮನೀಷ್‌ ಇಬ್ಬರೂ ತಂಡಕ್ಕೆ ವಾಪಸ್‌ ಆಗಿದೆ. ಇದು ರಾಜ್ಯ ತಂಡಕ್ಕೆ ಆನೆ ಬಲ ಸಿಕ್ಕಂತಾಗಿದೆ.

ದಿಲ್ಲಿ ಸುಲಭ ಎದುರಾಳಿ ಅಲ್ಲ: ಅನುಭವಿ ಆಟಗಾರ ಗೌತಮ್‌ ಗಂಭೀರ್‌, ಇಶಾಂತ್‌ ಶರ್ಮ, ಯುವ ಸ್ಫೋಟಕ ಆಟಗಾರರಾದ ರಿಷಭ್‌ ಪಂತ್‌, ನಿತೀಶ್‌ ರಾಣಾ ಮುಂತಾದವರು ತಂಡದಲ್ಲಿದ್ದಾರೆ. ಯಾವುದೇ ಬೌಲರ್‌ಗಳನ್ನಾದರೂ ಎದುರಿಸುವ ತಾಕತ್ತು ಗಂಭೀರ್‌ಗೆ ಇದೆ. ಈವರೆಗೆ ಮೂರು ಪಂದ್ಯದಲ್ಲಿ ನಿತೀಶ್‌ ರಾಣಾ (283 ರನ್‌) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಬೌಲಿಂಗ್‌ನಲ್ಲಿ ಇಶಾಂತ್‌ ಶರ್ಮ (15 ವಿಕೆಟ್‌), ಮನನ್‌ ಶರ್ಮ (12 ವಿಕೆಟ್‌), ನವದೀಪ್‌ ಸೈನಿ (11 ವಿಕೆಟ್‌) ಅವರ ಅತ್ಯುತ್ತಮ ದಾಳಿಯೇ ತಂಡಕ್ಕೆ ವರವಾಗಿದೆ.

ಈ ಎಲ್ಲ ದೃಷ್ಟಿಯಿಂದ ಉಭಯ ತಂಡಗಳ ನಡುವೇ ಭಾರೀ ಹೋರಾಟವನ್ನು ನಿರೀಕ್ಷಿಸಬಹುದು. ಒಮ್ಮೆ ಈ ಪಂದ್ಯದಲ್ಲಿ ಕರ್ನಾಟಕ ಡ್ರಾ ಸಾಧಿಸಿದರೂ “ಎ’ ಗುಂಪಿನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲಿದೆ.

ಕರ್ನಾಟಕ ತಂಡ:
ವಿನಯ್‌ ಕುಮಾರ್‌ (ನಾಯಕ), ಕೆ.ಎಲ್‌.ರಾಹುಲ್‌, ಆರ್‌.ಸಮರ್ಥ್, ಮಾಯಾಂಕ್‌ ಅಗರ್ವಾಲ್‌, ಕರುಣ್‌ ನಾಯರ್‌, ಮನೀಷ್‌ ಪಾಂಡೆ, ಸ್ಟುವರ್ಟ್‌ ಬಿನ್ನಿ, ಸಿ.ಎಂ.ಗೌತಮ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಜೆ.ಸುಚಿತ್‌, ಪವನ್‌ ದೇಶಪಾಂಡೆ, ಕೌನೈನ್‌ ಅಬ್ಟಾಸ್‌.

Advertisement

Udayavani is now on Telegram. Click here to join our channel and stay updated with the latest news.

Next