Advertisement

Mangaluru: ಆಸ್ತಿ ತೆರಿಗೆ ಇಳಿಕೆಗೆ ‘ಶ್ರೇಣಿ’ ಪರಿಷ್ಕರಣೆ ಸೂತ್ರ

03:14 PM Aug 13, 2024 | Team Udayavani |

ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಏರಿಕೆಯಾಗಿರುವ ʼಸ್ವಯಂಘೋಷಿತ ಆಸ್ತಿ ತೆರಿಗೆʼಯ ʼಸ್ವರೂಪʼ ಮರುಪರಿಶೀಲಿಸುವ ನಿಟ್ಟಿನಲ್ಲಿ ಮಹತ್ವದ ಮೊದಲ ಸಭೆ ನಡೆದಿದ್ದು, ಕೆಲವೇ ದಿನದಲ್ಲಿ ಮತ್ತೂಂದು ಸಭೆಯ ಮೂಲಕ ಸರಕಾರಕ್ಕೆ ಪರಿಷ್ಕೃತ ತೆರಿಗೆ ಶ್ರೇಣಿಯ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಗಿದೆ.

Advertisement

ಹಾಲಿ ಮಾರ್ಗಸೂಚಿ ದರಗಳ ಪ್ರಕಾರ ತೆರಿಗೆ ದರಗಳ ಶ್ರೇಣಿಯಲ್ಲಿ ಪರಿಷ್ಕರಣೆ ಮಾಡಲು ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮೇಯರ್‌ ಅಧ್ಯಕ್ಷತೆಯಲ್ಲಿ ಹಿರಿಯ ಸದಸ್ಯರ ಉಪಸ್ಥಿತಿಯಲ್ಲಿ ಈ ಶ್ರೇಣಿ ನಿಗದಿ ಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಇದರಂತೆ, ಒಂದು ಸುತ್ತಿನ ಸಭೆ ನಡೆದಿದ್ದು, ಅಂತಿಮ ತೀರ್ಮಾನ ಅದರಲ್ಲಿ ನಡೆದಿಲ್ಲ. ಹೀಗಾಗಿ 2ನೇ ಸಭೆ ಕೆಲವೇ ದಿನಗಳಲ್ಲಿ ನಡೆಯುವ ನಿರೀಕ್ಷೆಯಿದೆ.

ಪ್ರಸ್ತುತ ಸರಕಾರದ ಗೈಡೆನ್ಸ್‌ ವ್ಯಾಲ್ಯೂ ಮೇಲೆ ತೆರಿಗೆ ವಿಧಿಸ ಬೇಕು ಎಂಬ ನಿಯಮ ಮಾಡಿದ್ದರೂ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯ ಶ್ರೇಣಿಯನ್ನು ನಿರ್ಧರಿಸುವ ಜವಾಬ್ದಾರಿ ಪಾಲಿಕೆಯದ್ದಾಗಿದೆ. ಅದರಂತೆ ಕ್ರಮವಹಿಸುವ ಅವಕಾಶ ಇದೆ ಎಂಬ ಪ್ರಕಾರವಾಗಿ ಇದೀಗ ತೆರಿಗೆ ವಿಧಾನದಲ್ಲಿ ಬದಲಾವಣೆ ಮಾಡುವುದು ಉದ್ದೇಶ.

ನಗರ ವ್ಯಾಪ್ತಿಯಲ್ಲಿ ಈಗಾಗಲೇ 1-10-2023ರಿಂದ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳನ್ನು ಜಾರಿಗೆ ತರಲಾಗಿದೆ. ಈ ಮಾರುಕಟ್ಟೆ ದರಗಳನ್ನು ಅಳವಡಿಸಿ 2024-25ನೇ ಸಾಲಿಗೆ ಆಸ್ತಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಾರ್ಗಸೂಚಿ ದರವನ್ನು ಈ ಬಾರಿಗೆ ಅಳವಡಿಸಿದ ಕಾರಣದಿಂದ ವಾಸ್ತವ್ಯ, ವಾಣಿಜ್ಯ, ವಾಸ್ತವ್ಯೇತರ, ಖಾಲಿ ನಿವೇಶನದ ತೆರಿಗೆ ದರಗಳ ಶ್ರೇಣಿ ಕಳೆದ ಬಾರಿಗಿಂತ ದುಪ್ಪಟ್ಟಾಗಿದೆ. ಇದು ಸಾರ್ವಜನಿಕರಿಗೆ ತೆರಿಗೆ ಹೊರೆ ಸೃಷ್ಟಿಸಿದೆ.

ಆಸ್ತಿ ತೆರಿಗೆ ಏರಿಕೆ; ನಿಯಮವೇನು?

Advertisement

ಪ್ರತೀ ಹಣಕಾಸು ವರ್ಷದಲ್ಲಿ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಿ ಅಥವಾ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗದಿದ್ದಲ್ಲಿ ಪ್ರತೀ ವರ್ಷ ಶೇ.3ರಷ್ಟು ಹೆಚ್ಚಳ ಮಾಡಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕು ಎಂಬ ನಿಯಮವಿದೆ. ಆಸ್ತಿ ತೆರಿಗೆಯು ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಬಹುಮುಖ್ಯ ಆದಾಯದ ಮೂಲವೂ ಹೌದು. ಹೀಗಾಗಿ ಕಾಯ್ದೆಗಳಲ್ಲಿ ತಿದ್ದುಪಡಿ ಆಗಿರುವ ಅಂಶಗಳನ್ನು ಪರಿಗಣಿಸಿ “ಪ್ರಸಕ್ತ ಸಾಲಿನಲ್ಲಿ ಇರುವ ಆಸ್ತಿ ತೆರಿಗೆಯ ಬೇಡಿಕೆಗಿಂತ ಕಡಿಮೆಯಾಗದ ರೀತಿಯಲ್ಲಿ’ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸಲು ಸರಕಾರದ ಆದೇಶವಿದೆ.

ಖಾಲಿ ನಿವೇಶನಕ್ಕೆ ತೆರಿಗೆಯೇ ಹೊರೆ!

ಈ ಮೊದಲು ಖಾಲಿ ನಿವೇಶನಕ್ಕೆ ತೆರಿಗೆ ಇರಲಿಲ್ಲ. ಹೀಗಾಗಿ 10 ಸೆಂಟ್ಸ್‌ ಜಾಗ ಇರುವವರಿಗೆ 1 ಸಾವಿರ ಚದರ ಅಡಿಯ ಮನೆ ಇದ್ದರೆ ಅದಕ್ಕೆ ಮಾತ್ರ ತೆರಿಗೆ ಇತ್ತು. ಆದರೆ, ಈಗ ಒಟ್ಟು 10 ಸೆಂಟ್ಸ್‌ ಜಾಗಕ್ಕೂ ತೆರಿಗೆ ಕ್ರಮ ಜಾರಿಯಾಗಿರುವುದು ನಗರವಾಸಿಗಳನ್ನು ಕಂಗೆಡಿಸುತ್ತಿದೆ. ಹೊಸ ಮಾರ್ಗಸೂಚಿ ಪ್ರಕಾರ ಭೂಪರಿವರ್ತನೆ ಆಗಿರುವ ಖಾಲಿ ಜಾಗಕ್ಕೂ ಶೇ.0.02ರಷ್ಟು ತೆರಿಗೆ ವಿಧಿಸ ಲಾಗುತ್ತಿದೆ. ಇದು ನಗರದ ಜನರಿಗೆ ದುಬಾರಿಯಾ ಗುತ್ತಿದೆ ಎಂಬುದು ನಗರವಾಸಿಗಳ ಆಕ್ಷೇಪ. ಮೇಯರ್‌ ಸುಧೀರ್‌ ಶೆಟ್ಟಿ ಅವರ ಪ್ರಕಾರ “ಖಾಲಿ ನಿವೇಶನಕ್ಕೆ ಶೇ.0.02ರಷ್ಟು ತೆರಿಗೆ ವಿಧಿಸುವ ಬದಲು ಇದನ್ನು ಶೇ.0.01ಗೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪ್ರಮುಖರ ಜತೆಗೆ ಚರ್ಚಿಸಿ ಇದನ್ನು ಸರಕಾರದ ಗಮನಕ್ಕೆ ತರಲಾಗುವುದು’ ಎನ್ನುತ್ತಾರೆ.

ಮತ್ತೂಂದು ಸಭೆ ನಡೆಸಿ ತೀರ್ಮಾನ

ನಗರ ವ್ಯಾಪ್ತಿಯಲ್ಲಿ ಜಾರಿಯಲ್ಲಿ ರುವ ಸ್ವಯಂಘೋಷಿತ ಆಸ್ತಿ ತೆರಿಗೆ ಯಲ್ಲಿ ಸದ್ಯ ಸಾರ್ವಜನಿಕರಿಗೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಆ ತೆರಿಗೆ ಸ್ವರೂ ಪವನ್ನೇ ಮರುಪರಿಶೀಲಿಸಲು ಉದ್ದೇಶಿಸಲಾಗಿದೆ. ಪಾಲಿಕೆ ಸಭೆಯ ತೀರ್ಮಾನದಂತೆ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ 2ನೇ ಸುತ್ತಿನ ಸಭೆ ನಡೆಸಿ ಪರಿಷ್ಕೃತ ತೆರಿಗೆ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು.
-ಸುಧೀರ್‌ ಶೆಟ್ಟಿ ಕಣ್ಣೂರು, ಮೇಯರ್‌-ಮಂಗಳೂರು ಪಾಲಿಕೆ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next