ಚನ್ನಪಟ್ಟಣ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಚುನಾವಣಾ ಕಣಗಳ ಸಾಲಿನಲ್ಲಿ ಚನ್ನಪಟ್ಟಣ ಕ್ಷೇತ್ರವೂ ಒಂದು. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಸಚಿವರ ನಡುವೆ ಪಕ್ಷ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆದ ಈ ಚುನಾವಣೆ ನೇರ ಹಣಾಹಣಿಯಲ್ಲಿ ಕೊನೆಗೊಂಡಿತು.
ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಗೆದ್ದಿದ್ದರೂ, ನೆರೆಯ ರಾಮನಗರ ಕ್ಷೇತ್ರದಲ್ಲಿ ಎಚ್ಡಿಕೆ ಅವರ ಪುತ್ರ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಸೋಲು ಆಘಾತ ಮೂಡಿಸಿದೆ. ಇದಲ್ಲದೆ, ಈ ಬಾರಿ ಜೆಡಿಎಸ್ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡುವಲ್ಲಿ ಬಹುತೇಕ ವಿಫಲವಾಯಿತಲ್ಲ ಎಂಬ ತೀವ್ರ ಅಸಮಾಧಾನದಿಂದ ಚನ್ನಪಟ್ಟಣ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಎಲ್ಲಿಯೂ ಅದ್ಧೂರಿಯಾಗಿ ಗೆಲುವನ್ನು ಸಂಭ್ರಮಿಸಲಿಲ್ಲ.
ಸರ್ಕಾರದಿಂದ ಅನುದಾನ: ಇನ್ನು ಎಂಎಲ್ಸಿ ಯೋಗೇಶ್ವರ್ ಅವರು ಕೂಡ ಕಳೆದೊಂದು ವರ್ಷದಿಂದ ತಮ್ಮಿಂದ ಕೈ ಜಾರಿದ ಕ್ಷೇತ್ರವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಭಾರೀ ಸುತ್ತಾಟ ನಡೆಸಿದ್ದರು. ಅತ್ತ ಸರ್ಕಾರದಿಂದ ಅನುದಾನ ತಂದರು. ಪಕ್ಷಕ್ಕೆ ಸಾವಿರಾರು ಮುಖಂಡರನ್ನು ಆಹ್ವಾನಿಸಿದರು, ಪ್ರಧಾನಿಯನ್ನೇ ಕ್ಷೇತ್ರಕ್ಕೆ ತಂದು ಸಾವಿರಾರು ಜನ ಸೇರಿಸಿ “ಎಲ್ಲರೂ ಹುಬ್ಬೇರುವಂತೆ’ ಮಾಡಿದ್ದರು. ಪ್ರತಿ ಮನೆ-ಮನೆಗೆ ಹೋಗಿ ಕೈ ಮುಗಿದರು.
ನಿರೀಕ್ಷಿಸದ ಫಲಿತಾಂಶ: ನೂರಾರು ದೇವಸ್ಥಾನಗಳಿಗೆ ಹತ್ತಾರು ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಲ್ಲದೆ, ಲಕ್ಷದಿಂದ 10 ಲಕ್ಷ ರೂ. ವರೆಗೂ ಹಲವು ದೇವಸ್ಥಾನದ ಅಭಿವೃದ್ಧಿಗೆ ಹಣ ನೀಡಿದ್ದಲ್ಲದೆ, ಗೆದ್ದ ಬಳಿಕ ರಾಜಗೋಪುರ ಸೇರಿದಂತೆ ನೂರಾರು ದೇವಸ್ಥಾನದ ಅಭಿವೃದ್ಧಿ ನನ್ನ ಹೊಣೆ ಎಂದಿದ್ದರು. ಇನ್ನೇನು ಗೆದ್ದು ಹಳೆ ಮೈಸೂರ್ ಭಾಗದ ಬಿಜೆಪಿಯ ಬಿಗ್ ಲೀಡರ್ ಎನ್ನಿಸಿಕೊಳ್ಳುವ ಆಶಾಭಾವನೆ ಹೊಂದಿದ್ದ ಸಿಪಿವೈ ಚುನಾವಣೆಗೂ ಒಂದು ವಾರ ಕೊಂಚ ನಿಧಾನರಾದ ಕಾರಣವೋ? ಬಿಜೆಪಿಯ ಜನವಿರೋಧಿ ಅಲೆಯೋ, ಜೆಡಿಎಸ್ ನವರು ಮುಸ್ಲಿಂ ಮತ ಪಡೆಯುವ ರಣತಂತ್ರದಿಂದಾಗಿ ಸೋಲುಂಡು, ನಿರೀಕ್ಷಿಸದಿದ್ದ ಫಲಿತಾಂಶ ಬಂದದ್ದು ತಡಕೊಳ್ಳಲಾಗದ ಪೆಟ್ಟು ಎಂಬುದರಲ್ಲಿ ಎರಡು ಮಾತಿಲ್ಲ.
ಸ್ವಕ್ಷೇತ್ರ ಹೊರಗಿನವರ ಪಾಲು: ಎಂಎಲ್‌ಎ ಸ್ಥಾನದ ಜೊತೆಗೆ ತಮ್ಮ ಸ್ವಕ್ಷೇತ್ರ ಹೊರಗಿನವರ ಪಾಲಾಯಿತಲ್ಲ ಎಂಬ ದುಃಖ ಹಲವಾರು ದಿನದವರೆಗೆ ಬಾಧಿಸೋದು ಮಾತ್ರ ಸಹಜ. ಇನ್ನು ಚನ್ನಪಟ್ಟಣದಲ್ಲಿ ಇದ್ದೂ ಇಲ್ಲದಂತಿರುವ ಕಾಂಗ್ರೆಸ್ ಪಕ್ಷವು ಕೂಡ ಈ ಬಾರಿ ಎಸ್. ಗಂಗಾಧರ್ ಅವರು ತೆಗೆದುಕೊಂಡ ಹದಿನೈದು ಸಾವಿರ ಚಿಲ್ಲರೆ ಮತಗಳನ್ನು ಗಳಿಸಿದ ಪರಿಣಾಮವಾಗಿ, ರಾಜ್ಯದಲ್ಲಿ ಈ ಬಾರಿ ಭರ್ಜರಿ ಜಯಭೇರಿ ಬಾರಿಸಿದರೂ ವಿಜಯೋತ್ಸವದಿಂದ ದೂರವೇ ಉಳಿಯಿತು.
ಇಂದು ಯೋಗೇಶ್ವರ್ ಕೃತಜ್ಞತಾ ಸಭೆ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಜಿತಗೊಂಡಿರುವ ಬಿಜೆಪಿ ಅಭ್ಯರ್ಥಿ, ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಅವರು ತಾಲೂಕಿನ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮೇ 17ರ ಬುಧವಾರ ಕೃತಜ್ಞತಾ ಸಮಾರಂಭವನ್ನು ಆಯೋಜಿಸಿದ್ದಾರೆ. ಪಟ್ಟಣದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಸಂಜೆ 4 ಗಂಟೆಗೆ ಕೃತಜ್ಞತಾ ಸಭೆಯನ್ನು ಆಯೋಜಿಸಲಾಗಿದೆ.
-ಎಂ.ಶಿವಮಾದು