ಲಕ್ನೋ: ಇನ್ನು ಮುಂದೆ ಸರಕಾರಿ ಕಡತಗಳು ಹಾಗೂ ದಾಖಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನ ಜತೆಗೆ ‘ರಾಮ್‌ಜೀ’ ಪದ ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರಕಾರ ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಎಸ್‌ಪಿ ಆಕ್ಷೇಪಿಸಿದ್ದು, 2019ರ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಸರಕಾರ ಯತ್ನಿಸುತ್ತಿದೆ ಎಂದಿದೆ.ಅಂಬೇಡ್ಕರ್ ಪೂರ್ಣ ಹೆಸರು ‘ಭೀಮರಾವ್ ರಾಮ್ ಜೀ ಅಂಬೇಡ್ಕರ್’ ಆಗಿದ್ದು, ಹೆಚ್ಚಿನ ಸಂದರ್ಭಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಎಂದೇ ಬಳಸಲಾಗುತ್ತದೆ. ಹೆಸರು ಬದಲಾವಣೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್, ‘ಆದೇಶ ಬುಧವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ’ ಎಂದಿದ್ದಾರೆ. ರಾಮ್‌ಜೀ ಎನ್ನುವುದು ಅಂಬೇಡ್ಕರ್‌ರ ತಂದೆಯ ಹೆಸರಾಗಿದ್ದು, ಮಗ ತನ್ನ ಹೆಸರು ಬರೆಯುವಾಗ ತಂದೆಯ ಹೆಸರನ್ನು ಮಧ್ಯದಲ್ಲಿ ಬಳಕೆ ಮಾಡುವುದು ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳಲ್ಲಿ ರೂಢಿಯಲ್ಲಿದೆ.
ಬದಲಾವಣೆಗೆ ಕಾರಣ ಏನು? 2017ರಲ್ಲಿ ರಾಜ್ಯಪಾಲ ರಾಮ್ ನಾಯ್ಕ ಈ ಸಂಬಂಧ ಪ್ರಧಾನಿ, ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಮಹಾಸಭಾಗೆ ಪತ್ರ ಬರೆದಿದ್ದರು.
ಅಂಬೇಡ್ಕರ್ ಹೆಸರಲ್ಲಿನ ಅಕ್ಷರಗಳನ್ನು ತಪ್ಪಾಗಿ ಬರೆಯಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ. ಅಂಬೇಡ್ಕರ್ ಹೆಸರು ಸರಿಯಾಗಿ ದಾಖಲಾಗಬೇಕು ಎನ್ನುವುದಷ್ಟೇ ಸರಕಾರದ ಉದ್ದೇಶ.
– ಸ್ವಾಮಿ ಪ್ರಸಾದ್ ಮೌರ್ಯ, ಸಂಪುಟ ಸಚಿವ
ಲೋಕಸಭೆ ಚುನಾವಣೆ ಸಮೀಪಿಸುವಾಗ ಅಂಬೇಡ್ಕರ್ ಅವರೂ ರಾಮ ಭಕ್ತರಾಗಿದ್ದರು ಎಂದರೂ ಆಶ್ಚರ್ಯವಿಲ್ಲ.
– ಪ್ರಕಾಶ್ ಅಂಬೇಡ್ಕರ್, ಅಂಬೇಡ್ಕರ್ ಮೊಮ್ಮಗ