Advertisement

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

02:02 AM Nov 27, 2024 | Team Udayavani |

ಬೆಂಗಳೂರು: ಜನರ ಆಶೀರ್ವಾದ ಇರುವ ತನಕ ನಾನು ಯಾರಿಗೂ ಜಗ್ಗುವುದಿಲ್ಲ; ಬಗ್ಗುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ನಾನು 2ನೇ ಸಲ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲು ಕೆಲವರಿಗೆ ಆಗುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದರು.

ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆಯನ್ನು ಡಾ| ಬಿ.ಆರ್‌.ಅಂಬೇಡ್ಕರ್‌ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಹೇಳಿದ್ದರು. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ಜಾರಿಗೆ ಹಿಂದೂ ಮಹಾ ಸಭಾದ ಸಾವರ್ಕರ್‌, ಗೋಳ್ವಾಳ್ಕರ್‌ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ ಆರೆಸ್ಸೆಸ್‌ ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿತ್ತು ಎಂದು ಹೇಳಿದರು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಅನಂತಕುಮಾರ ಹೆಗಡೆ ಹೇಳಿದ್ದರು
ಮೋದಿ ಮಂತ್ರಿಮಂಡಲದಲ್ಲಿ ಮಂತ್ರಿ ಆಗಿದ್ದ ಅನಂತ ಕುಮಾರ ಹೆಗಡೆ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಸಾರ್ವಜನಿಕವಾಗಿ ಹೇಳಿದ್ದರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸ ಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸ ಲಿಲ್ಲ. ಆದ್ದರಿಂದ ಅನಂತ ಕುಮಾರ ಹೆಗಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿ ಯಾಗಿ ಅರ್ಥಮಾಡಿಕೊಳ್ಳಬೇಕು ಎಂದರು. ಡಿಸಿಎಂ ಡಿ.ಕೆ. ಶಿವಕುಮಾರ್‌, ಸಚಿವ ಎಚ್‌.ಸಿ. ಮಹದೇವಪ್ಪ ಮಾತನಾಡಿದರು.

Advertisement

ಮಹದೇವಪ್ಪಗೆ ರಜೆ ನೀಡಿ ಉಪನ್ಯಾಸಕ್ಕೆ ಕಳುಹಿಸಬೇಕು
ಸಚಿವ ಎಚ್‌.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪ ನೀಡಿದ್ದಾರೆ. ಅವರಿಗೆ ರಜೆ ನೀಡಿ ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು. ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next