ರಾಮನಗರ: ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನಾ ಜಲಕ್ಷಾಮ ಎದುರಾಗಿದೆ. ಗ್ರಾಮಾಂತರ ಪ್ರದೇಶಕ್ಕಿಂತ ಹೆಚ್ಚಾಗಿ ನಗರ ಪ್ರದೇಶವನ್ನು ಕುಡಿಯುವ ನೀರಿನ ಬವಣೆ ಕಾಡುತ್ತಿದ್ದು, ಜಿಲ್ಲೆಯ 6 ನಗರಾಡಳಿತ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜನವರಿ ಅಂತ್ಯದ ವೇಳೆಗೆ ಉಲ್ಬಣಿಸಿದೆ. ಕೊಳವೆ ಬಾವಿಯನ್ನು ಆಶ್ರಯಿಸಿರುವ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ವ್ಯವಸ್ಥೆ, ಸದ್ಯಕ್ಕೆ ಸಮಾಧಾನಕರವಾಗಿದ್ದು, ಮಾರ್ಚ್ ತಿಂಗಳಲ್ಲಿ ಕೆಲ ಗ್ರಾಮಗಳಲ್ಲಿ ಸಹ ಕುಡಿಯುವ ನೀರಿನ ಬವಣೆ ಎದುರಾಗಲಿದೆ ಎಂದು ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
ಜಿಲ್ಲಾ ಕೇಂದ್ರಕ್ಕೆ ನೀರಿಲ್ಲ: ಜಿಲ್ಲಾ ಕೇಂದ್ರ ರಾಮನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ತೀವ್ರಗೊಂಡಿದೆ. ನಗರದಜನವಸತಿ ಪ್ರದೇಶ ಗಳಿಗೆ 15 ರಿಂದ 18 ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ರಾಮನಗರ ಪಟ್ಟಣ ಪ್ರದೇಶದಲ್ಲಿ 1.30 ಲಕ್ಷ ಮಂದಿ ಜನಸಂಖ್ಯೆ ಇದ್ದು, ಪ್ರತಿದಿನ 17.55 ಎಂಎಲ್‌ಡಿ(ಮಿಲಿಯನ್ ಲೀಟರ್ ಫರ್ ಡೇ) ನೀರಿನ ಅಗತ್ಯತೆ ಇದೆ ಎಂದು ಜಲಮಂಡಳಿಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಪ್ರಸ್ತುತ ಪೂರೈಕೆಯಾಗುತ್ತಿರುವುದು ಎಂಎಲ್‌ಡಿ ಮಾತ್ರ. 7.55 ಎಂಎಲ್‌ಡಿ ಯಷ್ಟು ನೀರಿ ಕೊರತೆ ಎದುರಾಗಿದೆ.
Related Articles
Advertisement
ಎರಡೂ ನದಿ ಬರಿದು: ರಾಮನಗರ ಮತ್ತು ಚನ್ನಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಶಿಂಷಾ ಮತ್ತು ಅರ್ಕಾವತಿ ನದಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಿಂಷಾನದಿಯ ನೀರನ್ನು ತೊರೆಕಾಡನಹಳ್ಳಿ ಬಳಿಯ ಪಂಪ್‌ಹೌಸ್‌ನಿಂದ ರಾಮನಗರ-ಚನ್ನಪಟ್ಟಣ ನಗರಕ್ಕೆ, ಅರ್ಕಾವತಿ ನದಿ ನೀರನ್ನು ನೇರವಾಗಿ ರಾಮನಗರಕ್ಕೆ ಪಂಪ್ ಮಾಡಲಾಗುತ್ತಿದೆ. ಜನವರಿ ಅಂತ್ಯಕ್ಕೆ ಎರಡು ನದಿಗಳು ಬತ್ತಿ ಹೋಗಿರುವ ಕಾರಣ ನೀರಿನ ಬವಣೆ ಉಲ್ಬಣಗೊಂಡಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಬ್ಯಾಕ್‌ವಾಶ್ ನೀರೇಗಟ್ಟಿ:
ಚನ್ನಪಟ್ಟಣ ಮತ್ತು ರಾಮನಗರ ಪಟ್ಟಣಗಳ ಕುಡಿಯುವ ನೀರಿಗೆ ತೊರೆಕಾಡನಹಳ್ಳಿ ಯಿಂದ ಬೆಂಗಳೂರಿಗೆ ಸರಬರಾಜಾಗುವ ಕಾವೇರಿ ನೀರಿನ ಬ್ಯಾಕ್‌ವಾಶ್ ನೀರಷ್ಟೇ ಆಸರೆಯಾಗಿದೆ. ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವ ಬೆಂಗಳೂರು ಜಲಮಂಡಳಿ, ನೀರಿನ ಕೊಳವೆಗಳನ್ನು ಶುದ್ಧೀಕರಿಸುವ ಉದ್ದೇಶದಿಂದ ಮತ್ತೆ ಕೊಳವೆಯನ್ನು ಹಿಂದಕ್ಕೆ ನೀರು ಬಿಡುತ್ತದೆ. ಹೀಗೆ ಹಿಂದಕ್ಕೆ ಬಿಡುವ ಬ್ಯಾಕ್‌ವಾಶ್ ನೀರು 15 ಎಂಎಲ್‌ಡಿಯಷ್ಟು ಸಿಗುತ್ತಿದ್ದು, ಇದರಲ್ಲಿ 6 ಎಂಎಲ್‌ಡಿ ಚನ್ನಪಟ್ಟಣಕ್ಕೆ, 6 ಎಂಎಲ್‌ಡಿ ರಾಮನಗರಕ್ಕೆ ಮತ್ತು ಉಳಿದ 3 ಎಂಎಲ್‌ಡಿ ಮಾರ್ಗಮಧ್ಯೆ ಇರುವ ಗ್ರಾಮಗಳಿಗೆ
ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಮಾಧಾನ: ಜಿಲ್ಲೆಯ ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ನೀರಿನ ಬವಣೆ ಅಷ್ಟಿಲ್ಲ. ಸದ್ಯಕ್ಕೆ ಜಿಲ್ಲೆಯ 3 ಗ್ರಾಮಗಳಲ್ಲಿ ಮಾತ್ರ ತೀವ್ರ ಕುಡಿಯುವ ನೀರಿನ ಭವಣೆ ಇದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲ ಕೊಳವೆ ಬಾವಿಗಳಲ್ಲಿ ಬರದಿಂದಾಗಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಕೊಳವೆಬಾವಿಗಳು ಬತ್ತಿಹೋದಲ್ಲಿ ಗ್ರಾಮೀಣ ಭಾಗದಲ್ಲೂ ಕುಡಿಯುವ ನೀರಿನ ಬವಣೆ ಉಲ್ಬಣಿಸಲಿದೆ. *ಸು.ನಾ.ನಂದಕುಮಾರ್