ರಾಮನಗರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯೂಸಿ ಪರೀಕ್ಷೆಗಳನ್ನು ನಡೆಸದೆ ವಿದ್ಯಾ ರ್ಥಿಗಳನ್ನು ಉತ್ತೀರ್ಣರೆಂದು ಘೋಷಿಸಿವಂತೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕಿರ್ಣದ ಮುಂಭಾಗ ಶುಕ್ರವಾರ ಈ ವಿಚಾರದಲ್ಲಿ ಪ್ರತಿಭಟನೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿ, 10 ತಿಂಗಳ ಅವಧಿಯಲ್ಲಿ ಕಲಿಯುವ ಪಾಠವನ್ನು ಈ ವಿದ್ಯಾರ್ಥಿಗಳಿಗೆ ಕೇವಲ 2 ತಿಂಗಳ ಕಾಲ ತರಗತಿಗಳು ನಡೆದಿವೆ. ಅಲ್ಲದೆ ಆನ್ಲೈನ್ ಕ್ಲಾಸುಗಳು ಸಂಪೂರ್ಣ ವಿಫಲವಾಗಿವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸುಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಯಾವ್ಯಾವುದೋ ಮಾರ್ಗಗಳನ್ನು ಹುಡುಕಿಕೊಳ್ಳುತ್ತವೆ ಎಂದರು.
ಹೇಗೆ ಪರೀಕ್ಷೆ ನೆಡೆಸುತ್ತೀರಾ ಹೇಳಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ಸರ್ಕಾರಕ್ಕೆ ಸ್ಪಷ್ಟತೆಯಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆಯಲ್ಲಿದ್ದಾರೆ. ಪರೀಕ್ಷೆ ನಡೆಸುವುದಾದರೆ ದಿನಾಂಕದ ಕುರಿತು ಮಾಹಿತಿ ಮತ್ತು ಪರೀಕ್ಷೆಗಳು ಹೇಗೆ ಇರಲಿವೆ ಎಂದು ಸರ್ಕಾರ ಹೇಳ ಬೇಕು. ಎಸ್ಸೆಸ್ಸೆಲ್ಲಿ, ಪಿಯುಸಿ 15 ಲಕ್ಷ ವಿದ್ಯಾರ್ಥಿಗಳು ಸರ್ಕಾರದ ತೀರ್ಮಾನಕ್ಕಾಗಿ ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಮಾಡದೇ ಪಾಸ್ ಮಾಡಬೇಕು ಎಂದರು.
ಬಿಎಸ್ವೈಗೆ ಇವೆಲ್ಲ ಬೇಕಾಗಿಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ವಿಚಿತ್ರ ಮನುಷ್ಯ, ಸಿಎಂ, ಬಿ.ಎಸ್.ಯಡಿಯೂರಪ್ಪ ಅವರಿಗೆ ಮಕ್ಕಳ ಭವಿಷ್ಯ ಬೇಕಾಗಿಲ್ಲ. ಅವರು ತಮ್ಮ ಸರ್ಕಾರ ಉಳಿಸಿಕೊಳ್ಳ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ಶಿಕ್ಷಣ ಸಚಿವರ ಮಕ್ಕಳ ಜತೆಗೆ ಆಟವಾಡಬಾರದು. ಅವರು ಪರೀಕ್ಷೆ ಮಾಡುವುದಾದರೆ, ತರಗತಿ ಎಷ್ಟು ದಿನ ನಡೆದಿದೆ. ಕೇವಲ ಎರಡು ತಿಂಗಳ ಅವಧಿಯ ತರಗತಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆ ಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳ ದಂಗೆ ಏಳ್ತಾರೆ: ವಿದ್ಯಾರ್ಥಿಗಳು ದಂಗೆ ಏಳುವ ಮುನ್ನ ಶಿಕ್ಷಣ ಸಚಿವರು ಎಚ್ಚೆತ್ತುಕೊಳ್ಳ ಬೇಕು. ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯೂಸಿ ಪರೀಕ್ಷೆಗಳನ್ನು ರದ್ದುಮಾಡಿ ಪಾಸು ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ವಿಫಲವಾದರೆ ಜೂ. 1ರ ನಂತರ ತಮ್ಮ ಸಂಘಟನೆವತಿಯಿಂದಲೂ ಚಳವಳಿ ನಡೆಸುವ ಎಚ್ಚರಿಕೆ ನೀಡಿದರು. ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಪ್ರಮುಖರಾದ ಸಿ.ಎಸ್ .ಜಯಕುಮಾರ್, ಗಾಯತ್ರಿ ಬಾಯಿ, ತ್ಯಾಗರಾಜ್, ರಮೇಶ್ ಇದ್ದರು.