ಸಿರ್ಸಾ, ಹರಿಯಾಣ : ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗೈದ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮಿತ್ ರಾಮ್ ರಹೀಮ್ ಸಿಂಗ್‌ನ ಡೇರಾ ಕ್ಯಾಂಪಸ್ ಮೇಲೆ ಪೊಲೀಸ್ ದಾಳಿ ನಡೆದಿರುವ ಇಂದಿನ ಎರಡನೇ ದಿನ ಎರಡು ರಹಸ್ಯ ಸುರಂಗಗಳನ್ನು ಪತ್ತೆ ಮಾಡಲಾಗಿದೆ.
ಇವುಗಳಲ್ಲಿ ಒಂದು ಸುರಂಗವು ಡೇರಾ ಮುಖ್ಯಸ್ಥನ ಖಾಸಗಿ ನಿವಾಸದಿಂದ ಲೇಡೀಸ್ ಹಾಸ್ಟೆಲ್ “ಸಾಧ್ವಿ ನಿವಾಸ್’ಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಗೊತ್ತಾಗಿದೆ. ಇನ್ನೊಂದು ಸುರಂಗದ ಕಳ್ಳ ಮಾರ್ಗ ಯಾವುದೇ ಸಂದರ್ಭದಲ್ಲಿ ಡೇರಾ ಕ್ಯಾಂಪಸ್‌ನಿಂದ ಗುಪ್ತವಾಗಿ ಪಾರಾಗುವುದಕ್ಕಾಗಿ ನಿರ್ಮಿಸಲಾಗಿರುವಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಇಂದಿನ ಎರಡನೇ ದಿನ ಭದ್ರತಾ ಸಿಬಂದಿಗಳು ಡೇರಾ ಕ್ಯಾಂಪಸ್ ಒಳಗೆ ಅಕ್ರಮ ಸ್ಫೋಟಕ ತಯಾರಿಸುವ ಕಾರ್ಖಾನೆಯನ್ನು ಪತ್ತೆ ಹಚ್ಚಿದ್ದಾರೆ. ಸುಮಾರು 80 ಪೆಟ್ಟಿಗೆಗಳಲ್ಲಿ ತುಂಬಿಸಿಡಲಾಗಿದ್ದ ಸ್ಫೋಟಕಗಳನ್ನು ಭದ್ರತಾ ಸಿಬಂದಿಗಳು ವಶಪಡಿಸಿಕೊಂಡಿದ್ದಾರೆ. ವಿಧಿ ವಿಜ್ಞಾನ ತಂಡದವರು ಈ ಸ್ಫೋಟಕಗಳ ಸ್ವರೂಪವನ್ನು ಪರೀಕ್ಷಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಸರಕಾರಿ ವಕ್ತಾರ ಸತೀಶ್ ಮಿಶ್ರಾ ತಿಳಿಸಿದ್ದಾರೆ.
ಡೇರಾ ಕ್ಯಾಂಪಸ್ ಒಳಗೆ ಪತ್ತೆಯಾಗಿರುವ ಎರಡು ಸುರಂಗಗಳಲ್ಲಿ ಒಂದು ಡೇರಾ ಆವಾಸ್ ನಿಂದ ಸಾಧ್ವಿ ನಿವಾಸ್ (ಲೇಡೀಸ್ ಹಾಸ್ಟೆಲ್) ಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ಸುರಂಗ ಕೆಸರು ಕೊಳಚೆಯ ಸುಮಾರು 5 ಕಿ.ಮಿ. ಮಾರ್ಗದ್ದಾಗಿದ್ದು ಡೇರಾ ಆವರಣದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕಲ್ಪಿಸುವ ಕಳ್ಳ ಸುರಂಗ ಇದಾಗಿದೆ ಎಂದು ಸರಕಾರಿ ವಕ್ತಾರ ಸತೀಶ್ ಮಿಶ್ರಾ ಹೇಳಿದ್ದಾರೆ.
ವಿಚಿತ್ರವೆಂದರೆ ಶೋಧ ಕಾರ್ಯಾಚರಣೆಯ ವೇಳೆ ಸಿಬಂದಿಗಳಿಗೆ ನೂರಾರು ಜೋಡಿ ಬೂಟುಗಳು, ಡಿಸೈನರ್ ಉಡುಪು ತೊಡುಪುಗಳು ಮತ್ತು ವರ್ಣಮಯ ಕ್ಯಾಪ್ ಗಳು ಸಿಕ್ಕಿವೆ. ಇವೆಲ್ಲವೂ ಕಳಂಕಿತ ಡೇರಾ ಮುಖ್ಯಸ್ಥನ ಬಳಕೆಯಲ್ಲಿದ್ದವು ಎಂದು ಹೇಳಲಾಗಿದೆ.