Advertisement

ಪರಿಸರ ಜಾಗೃತಿಗೆ ಮಕ್ಕಳಿಂದ ಜಾಥಾ

11:55 PM Jul 20, 2019 | Team Udayavani |

ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ, ಕಸ ವಿಂಗಡಣೆ, ಪಿಒಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಬಗ್ಗೆ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕಾದರೆ ನಿಮ್ಮ (ಮಕ್ಕಳ) ಪಾತ್ರ ಪ್ರಮುಖವಾಗಿದೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು.

Advertisement

ದಕ್ಷಿಣ ವಲಯದ ಬಿಬಿಎಂಪಿ, ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳೊಂದಿಗೆ ಶನಿವಾರ ಆಯೋಜಿಸಿದ್ದ ಪರಿಸರ ಸಂರಕ್ಷಣೆ ಜಾಥಾದಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿನಿತ್ಯ 5 ಸಾವಿರ ಟನ್‌ಗಳಷ್ಟು ಕಸ ಉತ್ಪತ್ತಿಯಾಗುತ್ತಿದ್ದು, ನಾಗರಿಕರು ಕಸವನ್ನು ಸಮರ್ಪಕವಾಗಿ ವಿಂಗಡಿಸದೇ ಇರುವ ಪರಿಣಾಮ ಕ್ವಾರಿಗಳಲ್ಲಿ ಸುರಿಯಲಾಗುತ್ತಿದೆ. ಈ ಸಂಬಂಧ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಹೊಸ ಟೆಂಡರ್‌ ಕರೆಯಲಾಗಿದ್ದು, ಸೆ.1ರಿಂದ ಜಾರಿಗೊಳಿಸಲಾಗುತ್ತಿದೆ.

ಆಗ ಕಡ್ಡಾಯವಾಗಿ ಹಸಿ ಕಸ, ಒಣ ಕಸ, ಪ್ರಾಣಿ ತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಬೇರ್ಪಡಿಸಿ ಕೊಡಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ. ವಿಂಗಡಣೆ ಮಾಡಿದ ಹಸಿ ಕಸವನ್ನು ಪಾಲಿಕೆ ವ್ಯಾಪ್ತಿಯಲ್ಲಿರುವ ಸಂಸ್ಕರಣಾ ಘಟಕಗಳಿಂದ ಗೊಬ್ಬರ ತಯಾರಿಸಿ ರೈತರಿಗೆ ವಿತರಿಸಲಾಗುವುದು ಎಂದರು. ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಈಗಾಗಲೇ ಬಿಬಿಎಂಪಿಯಿಂದ ಬೃಹತ್‌ ಆಂದೋಲನ ಹಮ್ಮಿಕೊಳ್ಳಾಗಿದೆ.

ಪ್ರತಿನಿತ್ಯವೂ ಪಾಲಿಕೆ ಆರೋಗ್ಯಾಧಿಕಾರಿಗಳು ಅನಿರೀಕ್ಷಿತವಾಗಿ ಸಗಟು ವ್ಯಾಪಾರ ಮಳಿಗೆ ಹಾಗೂ ಅಂಗಡಿಗಳಿಗೆ ದಿಢೀರ್‌ ಭೇಟಿಕೊಟ್ಟು ಪ್ಲಾಸ್ಟಿಕ್‌ ಜಪ್ತಿ ಮಾಡಿ ದಂಡ ವಿಧಿಸುತ್ತಿದ್ದಾರೆ. ಇದೇ ರೀತಿ ಪ್ಲಾಸ್ಟಿಕ್‌ ಬಳಕೆ ಮಾಡಿದಲ್ಲಿ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಕೈಚೀಲಗಳನ್ನು ಹೆಚ್ಚಾಗಿ ಬಳಸುತ್ತಿರುವ ಹಿನ್ನೆಲೆ ಅವರಿಗೆ ಪ್ಲಾಸ್ಟಿಕ್‌ ಕವರ್‌ ಬದಲು ಪೇಪರ್‌ ಬ್ಯಾಗ್‌ ಅಥವಾ ಬಟ್ಟೆ ಬ್ಯಾಗ್‌ ಬಳಸುವಂತೆ ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಗರದಲ್ಲಿ ನೀರಿನ ಅಭಾವ ದಿನೇ ದಿನೆ ಹೆಚ್ಚುತ್ತಲೇ ಇದೆ. ಈಗಾಗಲೇ ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, ನಿತ್ಯ ದೇಶ-ವಿದೇಶಗಳಿಂದ ಲಕ್ಷಾಂತರ ಜನರು ನಗರಕ್ಕೆ ಬರುತ್ತಾರೆ. ಆದ್ದರಿಂದ ಈಗಿನಿಂದಲೇ ನೀರನ್ನು ಮಿತವಾಗಿ ಬಳಸಲು ಮುಂದಾಗಬೇಕು. ಕಟ್ಟಡ ನಿರ್ಮಾಣದ ವೇಳೆ ಎಲ್ಲರೂ ಮಳೆ ನೀರು ಕೋಯ್ಲು ನಿರ್ಮಾಣ ಮಾಡಿ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಮುಂದಾಗಬೇಕು ಎಂದರು.

Advertisement

ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಗಣೇಶ ಮೂರ್ತಿ ಬಳಸುವುದರಿಂದ ಪರಿಸರಕ್ಕೆ ಮಾರಕವೇ ಹೆಚ್ಚು. ಗಣೇಶ ಚತುರ್ಥಿಯ ದಿನದಂದು ದೊಡ್ಡ ದೊಡ್ಡ ಪಿಒಪಿ ಗಣೇಶ ಮೂರ್ತಿಗಳನ್ನು ಕೂರಿಸುತ್ತಾರೆ. ನಂತರ ಅದನ್ನು ಕೆರೆಗಳಲ್ಲಿ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರು ಕಲುಷಿತವಾಗುತ್ತದೆ. ಮತ್ತೆ ಆ ನೀರನ್ನು ಬಳಸಿದರೆ ಹಲವು ರೋಗಗಳು ಹರಡುತ್ತವೆ. ಆದ್ದರಿಂದ ಪಿಒಪಿ ಗಣೇಶ ಮೂರ್ತಿಗಳ ಬದಲು ಮಣ್ಣಿನ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಿಸೋಣ ಎಂದು ಹೇಳಿದರು.

ಈ ಮೇಲಿನ ಎಲ್ಲ ಅಂಶಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ದಕ್ಷಿಣ ವಲಯದ ಎಲ್ಲಾ 44 ವಾರ್ಡ್‌ಗಳಲ್ಲಿ ಇಂದು ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದೇ ರೀತಿ ಉಳಿದ ಏಳು ವಲಯಗಳಲ್ಲೂ ಜಾಥಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next