Advertisement

ರಾಜ್ಯಸಭೆ ಟಿಕೆಟ್‌: ಕಾಂಗ್ರೆಸ್‌ಗೆ ಅಸಮಾಧಾನದ ಬಿಸಿ

11:01 PM May 30, 2022 | Team Udayavani |

ನವದೆಹಲಿ/ಪಾಟ್ನಾ: ಮುಂದಿನ ತಿಂಗಳ ಹತ್ತನೇ ತಾರೀಕಿನಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಟಿಕೆಟ್‌ ನೀಡಿಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಚಿತ್ರ ನಟಿ ನಗ್ಮಾ, ಕಾಂಗ್ರೆಸ್‌ನ ವಕ್ತಾರ ಪವನ್‌ ಖೇರಾ ಸೇರಿದಂತೆ ಪ್ರಮುಖರು ಟ್ವೀಟ್‌ ಮಾಡಿ, “ನಮ್ಮನ್ನೇಕೆ ಆಯ್ಕೆ ಮಾಡಿಲ್ಲ. ನಮ್ಮಲ್ಲಿ ಇರುವ ಕೊರತೆ ಏನು’ ಎಂದು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

Advertisement

ಚಿತ್ರನಟಿ ನಗ್ಮಾ ಟ್ವೀಟ್‌ ಮಾಡಿ 2003ರಲ್ಲಿ ಕಾಂಗ್ರೆಸ್‌ ಸೇರುವ ಸಂದರ್ಭದಲ್ಲಿ ಸೋನಿಯಾ ಜಿ ಅವರೇ ರಾಜ್ಯಸಭೆ ಟಿಕೆಟ್‌ ನೀಡುವ ವಾಗ್ಧಾನ ಮಾಡಿದ್ದರು. ನಂತರ ನಾವು ಅಧಿಕಾರ ಕಳೆದುಕೊಂಡೆವು. 18 ವರ್ಷ ಕಳೆದರೂ ಅವಕಾಶ ಸಿಗಲಿಲ್ಲ. ನನಗೇನು ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದಿಂದ ಸ್ಪರ್ಧಿಸಿರುವ ಇಮ್ರಾನ್‌ ಪ್ರತಾಪ್‌ಗ್ಡ ಅವರ ಮುಂದೆ ನಮ್ಮ ಪ್ರಯತ್ನ ವಿಫ‌ಲವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಮುಖಂಡ ಪವನ್‌ ಖೇರಾ ಕೂಡ “ನಮ್ಮ ತಪಸ್ಸು ವಿಫ‌ಲವಾಗಿದೆ’ ಎಂದು ಬರೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸನ್ಯಾಮ್‌ ಲೋಧ ಅವರು ಕೂಡ ಪಕ್ಷದ ಅಭ್ಯರ್ಥಿಗಳ ಯಾದಿಯನ್ನು ಮರು ಪರಿಶೀಲಿಸಬೇಕೆಂದು ಕೋರಿದ್ದಾರೆ.

ಪ್ರಮುಖರ ನಾಮಪತ್ರ:
ಅತೃಪ್ತಿ ಸ್ಫೋಟದ ನಡುವೆಯೇ ಚೆನ್ನೈನಲ್ಲಿ ಚಿದಂಬರಂ, ಭೋಪಾಲದಲ್ಲಿ ಗೋವಿಂದ ಸಿಂಗ್‌, ರಂಜೀತ್‌ ರಂಜನ್‌ ಸೇರಿದಂತೆ ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ.

ಬೇಡಿಕೆಗೆ ಸಮ್ಮತಿಸದ ಜೆಎಂಎಂ:
ರಾಜ್ಯಸಭೆ ಚುನಾವಣೆ ನಿಮಿತ್ತ ಜಾರ್ಖಂಡ್‌ನ‌ಲ್ಲಿ ಕೂಡ ಕಾಂಗ್ರೆಸ್‌ ಮತ್ತು ಜಾರ್ಖಂಡ್‌ ಮುಕ್ತಿ ಮೋರ್ಚಾ ನಡುವೆ ಕೊಂಚ ಅತೃಪ್ತಿಯ ಹೊಗೆ ಕಾಣಿಸಿಕೊಂಡಿದೆ. ರಾಜ್ಯಸಭೆಯ ಅಭ್ಯರ್ಥಿಯನ್ನಾಗಿ ಮಹುವಾ ಮಜಿ ಅವರನ್ನೇ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಆಯ್ಕೆ ಮಾಡಿದ್ದಾರೆ. ಈ ಸ್ಥಾನವನ್ನು ತನಗೆ ನೀಡಬೇಕು ಎಂದು ಕಾಂಗ್ರೆಸ್‌ ಕೋರಿತ್ತು. ಆದರೆ, ಈ ಬೇಡಿಕೆಗೆ ಸೊರೇನ್‌ ಸಮ್ಮತಿ ನೀಡಿರಲಿಲ್ಲ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್‌ ಜತೆಗೆ ಚರ್ಚೆ ನಡೆಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿಕೊಂಡಿದ್ದಾರೆ. ಆದರೆ, ಈ ಆಯ್ಕೆಗೆ ಜಾರ್ಖಂಡ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯಲ್ಲಿ ಅತೃಪ್ತಿ ಇದೆ ಎಂದು ಹೇಳಲಾಗುತ್ತಿದೆ.

Advertisement

ಆರ್‌.ಸಿ.ಪಿ.ಸಿಂಗ್‌ಗೆ ಅವಕಾಶ ಕೊಡಲಾಗಿದೆ: ನಿತೀಶ್‌
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಜೆಡಿಯುನ ಏಕೈಕ ಸಚಿವರಾಗಿರುವ ಆರ್‌.ಸಿ.ಪಿ. ಸಿಂಗ್‌ ಅವರಿಗೆ ರಾಜ್ಯಸಭೆ ಟಿಕೆಟ್‌ ನಿರಾಕರಿಸಲಾಗಿದೆ. ಆದರೆ, ಸದ್ಯಕ್ಕೆ ಅವರ ಸದಸ್ಯದ ಅವಧಿ ಇನ್ನೂ ಇರುವುದರಿಂದ ಅವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ. ಸಿಂಗ್‌ ಅವರಿಗೆ ಸಾಕಷ್ಟು ಅವಕಾಶಗಳನ್ನು ಕೊಡಲಾಗಿದೆ.

ಅವರು ಐಎಎಸ್‌ ಅಧಿಕಾರಿಯಾಗಿದ್ದಾಗಿನಿಂದಲೂ ಗೌರವಗಳು ಪ್ರಾಪ್ತಿಯಾಗುತ್ತಿವೆ ಎಂದು ಹೇಳಿದ್ದಾರೆ. ಜೆಡಿಯು ಅಭ್ಯರ್ಥಿಯನ್ನಾಗಿ ಜಾರ್ಖಂಡ್‌ನ‌ ಖೀರು ಮಹಾತೋ ಅವರನ್ನು ಕಣಕ್ಕೆ ಇಳಿಸಲಾಗಿದೆ. ನಿತೀಶ್‌ ಅವರು ಈ ಮಾತುಗಳನ್ನು ಹೇಳುವಾಗ ಬಿಹಾರದ ಬಿಜೆಪಿ ಮುಖಂಡರೂ ಉಪಸ್ಥಿತರಿದ್ದರು.

ಬಿಜೆಪಿಯಲ್ಲಿ ಪ್ರಮುಖರಿಗೆ ಇಲ್ಲ ಅವಕಾಶ
ಬಿಜೆಪಿಯಲ್ಲಿ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಮಾಜಿ ಸಚಿವ ಪ್ರಕಾಶ್‌ ಜಾವಡೇಕರ್‌, ಹಿರಿಯ ಮುಖಂಡರಾಗಿರುವ ಓ.ಪಿ.ಮಾಥುರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ ಗೌತಮ್‌, ವಿನಯ ಸಹಸ್ರ ಬುದ್ಧೆ, ಶಿವಪ್ರತಾಪ್‌ ಶುಕ್ಲಾ, ಸಯ್ಯದ್‌ ಝಫ‌ರ್‌ ಇಸ್ಲಾಂ ಅವರ ಹೆಸರನ್ನು ರಾಜ್ಯಸಭೆ ಚುನಾವಣೆಗೆ ಪರಿಗಣಿಸಲಾಗಿಲ್ಲ,

 

Advertisement

Udayavani is now on Telegram. Click here to join our channel and stay updated with the latest news.

Next