Advertisement

ರಾಜ್ಯಸಭೆ ಚುನಾವಣೆ: ಬಿಜೆಪಿಯ 3ನೇ ಅಭ್ಯರ್ಥಿ ಆತಂಕ

11:49 PM May 27, 2020 | mahesh |

ಬೆಂಗಳೂರು: ಕೋವಿಡ್ ನಡುವೆಯೇ ರಾಜ್ಯದಲ್ಲಿ ಮತ್ತೂಂದು ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗುತ್ತಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ಆಡಳಿತಾ ರೂಢ ಬಿಜೆಪಿ 3ನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ಗೆ ಆತಂಕ ಎದುರಾಗಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯ ಸಭೆಯ 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಕಾಮನ್‌ ಫ್ರೆಂಡ್‌ ಆಗಿರುವ ಪ್ರಭಾವಿಯೊಬ್ಬರನ್ನು ಕಣಕ್ಕಿಳಿಸಿ ಕಾಂಗ್ರೆಸ್‌-ಜೆಡಿಎಸ್‌ ಮತ ಬುಟ್ಟಿಗೆ ಕೈ ಹಾಕಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿದೆ.

Advertisement

ದೇವೇಗೌಡರ ಹಿಂದೇಟು?
ಕಳೆದ ಬಾರಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಸಿದ್ಧವಾಗಿ ಮಿಸ್‌ ಮಾಡಿಕೊಂಡ ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಜತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಚುನಾವಣೆಯ ಸ್ವರೂಪವೇ ಬದಲಾಗಲಿದೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಹ ಹಿಂದೇಟು ಹಾಕಿ ನಾನು ರಾಜ್ಯಸಭೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.

ಬೆಂಬಲದ ಲೆಕ್ಕಾಚಾರ
ಕಾಂಗ್ರೆಸ್‌ನ ಇನ್ನೊಬ್ಬ ಅಭ್ಯರ್ಥಿ ಗೆಲ್ಲಬೇಕಾದರೆ ಜೆಡಿಎಸ್‌ ನೆರವು ಬೇಕು. ಜೆಡಿಎಸ್‌ನಿಂದ ಅಭ್ಯರ್ಥಿ ಹಾಕಿದರೂ ಕಾಂಗ್ರೆಸ್‌ ಬೆಂಬಲ ಬೇಕು. ಬಿಜೆಪಿಯ ಬಳಿ 2 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ಅನಂತರವೂ 29 ಮತಗಳು ಉಳಿಯಲಿವೆ. 2ನೇ ಪ್ರಾಶಸ್ತ್ಯದ ಮತದ ಲೆಕ್ಕಾಚಾರ ದಲ್ಲಿ 15-16 ಮತ ಕ್ರೋಡೀಕರಿಸಿದರೆ 3ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದು.

ಗೌಡರಿಗೆ ಮನವಿ
ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನಿಂದ ಎಚ್‌.ಡಿ. ದೇವೇ ಗೌಡರನ್ನು ಕಣಕ್ಕಿಳಿಸುವ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ, ಬಿ.ಕೆ. ಹರಿಪ್ರಸಾದ್‌ ಅವರು, ತಾವು ಸ್ಪರ್ಧೆ ಮಾಡದಿದ್ದರೆ ನನಗೆ ಮತ್ತೂಂದು ಅವಧಿಗೆ ಬೆಂಬಲ ನೀಡಿ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ತಮ್ಮ ಆಪ್ತರ ಮೂಲಕ ಮನವಿಯ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಚ್‌.ಡಿ. ದೇವೇಗೌಡರ ಜೋಡಿ ಪ್ರವೇಶ ಮಾಡಿದರೆ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿ ರಂಗಪ್ರವೇಶ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೆ ಆಪರೇಷನ್‌?
ಈ ಮಧ್ಯೆ, ಆಪರೇಷನ್‌ ಕಮಲದಡಿ ಬಿಜೆಪಿಗೆ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಸೋತು ಈಗ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಸಚಿವರಾಗಲು ಬಯಸಿರುವ ಹಿರಿಯ ರಾಜಕಾರಣಿಯೊಬ್ಬರು ಅದು ಸಾಧ್ಯವಾಗದಿದ್ದರೆ ರಾಜ್ಯಸಭೆಗಾದರೂ ಕಳುಹಿಸಿ ಎಂದು ಬಿಜೆಪಿ ಬಳಿ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ನಾನು ಸೆಳೆಯುತ್ತೇನೆ ಎಂಬ ಭರವಸೆ ಸಹ ನೀಡಿದ್ದಾರೆ ಎಂದು ಗೊತ್ತಾಗಿದೆ.

Advertisement

ಲೆಕ್ಕಾಚಾರ ಏನು?
 ಜೂನ್‌ 25ಕ್ಕೆ ರಾಜ್ಯಸಭೆಯ ನಾಲ್ಕು ಸ್ಥಾನಗಳು ತೆರವಾಗಲಿದ್ದು, ಜೂನ್‌ ಎರಡನೇ ವಾರದಲ್ಲಿ ಚುನಾವಣೆ ನಡೆಯಬೇಕಿದೆ.
 ಬಿಜೆಪಿ ಪಕ್ಷೇತರರು ಹಾಗೂ ಬಿಎಸ್‌ಪಿ ಶಾಸಕನ ಬೆಂಬಲದೊಂದಿಗೆ 119 ಸಂಖ್ಯಾಬಲ ಹೊಂದಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತ ಹಂಚಿಕೆಯಾದರೂ 29 ಮತ ಉಳಿಯುತ್ತದೆ.
 ಮೂರನೇ ಅಭ್ಯರ್ಥಿ ಗೆಲುವಿಗೆ 16 ಮತಗಳ ಕೊರತೆ ಬೀಳಲಿದೆ.
ಕಾಂಗ್ರೆಸ್‌ 68 ಸದಸ್ಯರನ್ನು ಹೊಂದಿದ್ದು, ಓರ್ವ ಅಭ್ಯರ್ಥಿ ಗೆಲ್ಲಲು ಅಗತ್ಯವಾದ 45 ಮತಗಳ ಅನಂತರ ಹದಿಮೂರು ಹೆಚ್ಚುವರಿ ಮತ ಹೊಂದಿರಲಿದೆ.
 ಜೆಡಿಎಸ್‌ 34 ಮತ ಹೊಂದಿದ್ದು, ಓರ್ವ ಅಭ್ಯರ್ಥಿ ಗೆಲ್ಲಲು 14 ಮತಗಳ ಕೊರತೆ ಎದುರಿಸುತ್ತಿದೆ.
 ನಾಲ್ಕು ಸ್ಥಾನಗಳಿಗೆ ಐವರು ಹಾಗೂ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣಕ್ಕಿಳಿದರೆ ರಾಜಕೀಯ ಚಿತ್ರಣ ಬದಲಾಗಲಿದೆ.

ನಿವೃತ್ತಿಯಾಗಲಿರುವವರು
 ಡಾ| ಪ್ರಭಾಕರ ಕೋರೆ
 ಬಿ.ಕೆ. ಹರಿಪ್ರಸಾದ್‌
 ಪ್ರೊ| ರಾಜೀವ್‌ ಗೌಡ
 ಕುಪೇಂದ್ರ ರೆಡ್ಡಿ

 ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next