ಹೊಸದಿಲ್ಲಿ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಸತ್‌ನ ಮೇಲ್ಮನೆಯಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್‌ಗಿಂತ ದುಪ್ಪಟ್ಟು ಸ್ಥಾನವನ್ನು ಹೊಂದಿದೆ. ಇದೀಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ 41 ಸ್ಥಾನ ಹಾಗೂ ಬಿಜೆಪಿ 86 ಸ್ಥಾನಗಳನ್ನು ಹೊಂದಿದೆ.
245 ಸದಸ್ಯತ್ವ ಬಲದ ರಾಜ್ಯಸಭೆಯಲ್ಲಿ ಎನ್‌ಡಿಎ ಕೂಟ 100 ಸ್ಥಾನ ಪಡೆದುಕೊಂಡಿದೆ. ಮಿತ್ರ ಪಕ್ಷಗಳಾದ ಎಐಎಡಿಎಂಕೆ-9, ಬಿಜೆಡಿ-9, ವೈಎಸ್‌ಆರ್ ಕಾಂಗ್ರೆಸ್-6 ಸ್ಥಾನ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಬೆಂಬಲವನ್ನು ಹೊಂದಿದೆ. ಇದು ರಾಜ್ಯಸಭೆಯಲ್ಲಿ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಅಡಚಣೆ ಆಗುವುದಿಲ್ಲ. 20 ರಾಜ್ಯಗಳಿಂದ 61 ಸದಸ್ಯರು ಈ ಬಾರಿ ರಾಜ್ಯ ಸಭೆಗೆ ಆಯ್ಕೆಯಾಗಬೇಕಿತ್ತು. ಈ ಪೈಕಿ 42 ಮಂದಿ ಅವಿ ರೋಧವಾಗಿ ಆಯ್ಕೆಯಾಗಿದ್ದರು. 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ-8, ಕಾಂಗ್ರೆಸ್ ಹಾಗೂ ವೈಎಸ್‌ಆರ್ ಕಾಂಗ್ರೆಸ್ ತಲಾ 4 ಹಾಗೂ ವಿವಿಧ ಪಕ್ಷಗಳು 3 ಸ್ಥಾನಗಳನ್ನು ಗೆದ್ದುಕೊಂಡಿವೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್, ಜ್ಯೋತಿರಾದಿತ್ಯ ಸಿಂಧಿಯಾ ಮೊದಲಾದವರು ಇದೇ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದಾರೆ. ಹಲವು ವರ್ಷಗಳ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಇದೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ.