ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಮೂರು ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರಗಳು ನಡೆಯುತ್ತಿವೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆಯ ಮಾತುಕತೆಗಳು ನಡೆಯುತ್ತಿರುವುದರಿಂದ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬಿಜೆಪಿ ತನ್ನ ಹೆಚ್ಚುವರಿ ಮತಗಳ ಆಧಾರದಲ್ಲಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜೆಡಿಎಸ್ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡು ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಬುಧವಾರ ಜೆಡಿಎಸ್ ವಿಧಾನ ಪರಿಷತ್ ಸದಸ್ಯರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕುಪೇಂದ್ರ ರೆಡ್ಡಿಗೆ ಬೆಂಬಲ ಸೂಚಿಸಿ, ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮನವಿ ಮಾಡಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೂನ್ 3 ರ ವರೆಗೂ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಯಾವ ರೀತಿಯ ಚಟುವಟಿಕೆಗಳು ನಡೆಯುತ್ತವೆ ಎನ್ನುವುದನ್ನು ಬಿಜೆಪಿ ನಾಯಕರು ಗಮನಿಸುತ್ತಿದ್ದು, ಜೂನ್ 3 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ ಅಂದು ಎರಡೂ ಪಕ್ಷಗಳಲ್ಲಿ ಹೊಂದಾಣಿಕೆಯಾಗಿ ಕಾಂಗ್ರೆಸ್ ಅಥವಾ ಜೆಡಿಎಸ್ ಯಾರಾದರೂ ತಮ್ಮ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಿದರೆ, ಆ ನಂತರ ಏನು ಮಾಡಬೇಕು ಎಂದು ಯೋಚಿಸಿ ತೀರ್ಮಾನ ತೆಗೆದುಕೊಳ್ಳಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಬಿಜೆಪಿಯ ಮೂವರೂ ಅಭ್ಯರ್ಥಿಗಳು ಗೆಲ್ಲುತ್ತಾರೆ. ಯಾರದ್ದೇ ಸಹಾಯ ಇಲ್ಲದೇ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಮಗೆ ಯಾರ ಸಹಾಯನೂ ಬೇಕಾಗುವುದಿಲ್ಲ. ನಮ್ಮ ಮತಗಳಲ್ಲೇ ನಮ್ಮಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ.
-ಬಿ.ಎಸ್. ಯಡಿಯೂರಪ್ಪ , ಮಾಜಿ ಮುಖ್ಯಮಂತ್ರಿ