ಬೆಂಗಳೂರು: ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪರಸ್ಪರ ಕಚ್ಚಾಟದಲ್ಲಿ ನಿರತವಾಗಿದ್ದರೆ, ಬಿಜೆಪಿ ಮಾತ್ರ ನಿರಾಳವಾಗಿದೆ.
ನಾಲ್ಕನೇ ಸ್ಥಾನಕ್ಕಾಗಿ ಕಣಕ್ಕೆ ಇಳಿದಿರುವ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷದ ಜತೆ ಉತ್ತಮ ಸಂಬಂಧ ಹೊಂದಿದ್ದು, ಇದು ಅಡ್ಡ ಮತದಾನದ ಹಂತಕ್ಕೂ ಕರೆದೊಯ್ಯುವ ಸಾಧ್ಯತೆ ಇದೆ.
ತನ್ನ ಮೊದಲೆರಡು ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ಎಷ್ಟು ಮತಗಳನ್ನು ಹಂಚಿಕೆ ಮಾಡಬಹುದು ಎಂಬುದು ಇನ್ನೂ ಗೊತ್ತಾಗಿಲ್ಲ. ಸಾಮಾನ್ಯ ಲೆಕ್ಕಚಾರದ ಪ್ರಕಾರ ತಲಾ 45 ಮತ ನಿಯೋಜನೆ ಮಾಡಿದರೂ ಲೆಹರ್ ಸಿಂಗ್ ಅವರಿಗೆ 32 ಮತ ಉಳಿಕೆಯಾಗುತ್ತದೆ. ಇತ್ತ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಯವರ ಬಳಿಯೂ ಅಷ್ಟೇ ಮತ ಉಳಿಯುತ್ತದೆಯಾದರೂ ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಮತ ಹೊರ ಹೋಗುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ:ಟಿಆರ್ ಎಸ್ ನಾಯಕನ ಕಾರಿನಲ್ಲಿ ನಡೆದಿತ್ತು ಹೈದರಾಬಾದ್ ಬಾಲಕಿಯ ಗ್ಯಾಂಗ್ ರೇಪ್!
ಒಂದೊಮ್ಮೆ ಕಾಂಗ್ರೆಸ್ ನಿಂದ ಒಂದು ಮತ ಕುಪ್ಪೇಂದ್ರ ರೆಡ್ಡಿ ಪರ ಚಲಾವಣೆಯಾದರೂ ಅದು ಜೆಡಿಎಸ್ ಅನ್ನು ಗೆಲುವಿನ ದಡ ಹತ್ತಿಸುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಆ ಸಾಧ್ಯತೆ ಕಡಿಮೆ. ಕಾಂಗ್ರೆಸ್ ಗೆಲ್ಲುವುದಕ್ಕೆ ಕನಿಷ್ಠ ಎಂಟು ಮತಗಳು ಬೇಕು. ಆದರೆ ಜೆಡಿಎಸ್ ನಿಂದ ಅಷ್ಟು ಸಂಖ್ಯೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆ ಕಡಿಮೆ. ಒಂದು ಮತ ಕಾಂಗ್ರೆಸ್ ಪರ ವಾಲಿದರೂ ಬಿಜೆಪಿ ಮೂರನೇ ಅಭ್ಯರ್ಥಿಯ ಗೆಲುವು ನಿಶ್ಚಿತವಾಗುತ್ತದೆ. ಹೀಗಾಗಿ ರಾಜ್ಯಸಭಾ ಚುನಾವಣೆಯ ನಾಲ್ಕನೇ ಸ್ಥಾನದ ಗೆಲುವಿಗೆ ಈ ಒಂದು ಮತದ ಲೆಕ್ಕಾಚಾರ ಮಹತ್ವ ಪಡೆದುಕೊಂಡಿದೆ.