ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟಿನಲ್ಲಿ ಸುಮಾರು 135 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಮುಂದಿನ ಬೇಸಗೆಯಲ್ಲಿ ಜಕ್ರಿಬೆಟ್ಟಿನ ಅಣೆಕಟ್ಟಿನಲ್ಲಿ ನೀರು ತುಂಬಿ ನೀರಿನ ಆತಂಕ ದೂರವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ರವಿವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ 22.29 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 8 ಸೇತುವೆ ಸಹಿತ ಕಿಂಡಿ ಅಣೆಕಟ್ಟುಗಳ ಉದ್ಘಾಟನೆ ಹಾಗೂ 135 ಕೋ.ರೂ. ವೆಚ್ಚದಲ್ಲಿ ಜಕ್ರಿಬೆಟ್ಟಿನಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಯ ಪರಿಶೀಲನೆ ನಡೆಸಿ ಪತ್ರಕರ್ತರ ಜತೆ ಮಾತನಾಡಿದರು.
ಕಳೆದ ನವೆಂಬರ್‌ನಲ್ಲಿ ಸಚಿವ ಮಾಧುಸ್ವಾಮಿ ಈ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದು, 4 ತಿಂಗಳಲ್ಲೇ ಶೇ. 60ಕ್ಕೂ ಅಧಿಕ ಪೂರ್ತಿ ಯಾಗಿದೆ. ಬಂಟ್ವಾಳದಲ್ಲಿ ಸುಮಾರು 266 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಗೊಂಡಿದ್ದು, ಈ ವರ್ಷವೇ 17 ಕಾಮಗಾರಿ ನಡೆಸಲಾಗಿದೆ ಎಂದರು.
ಬೂಡಾ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಬಂಟ್ವಾಳ ಪುರಸಭಾ ಸದಸ್ಯರಾದ ಮೀನಾಕ್ಷಿ ಜೆ. ಗೌಡ, ಹರಿಪ್ರಸಾದ್, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷೆ ರೇಷ್ಮಾ ಶಂಕರಿ, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ರಾಯಿ ಗ್ರಾ.ಪಂ. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಸಣ್ಣ ನೀರಾವರಿ ಇಲಾಖೆಯ ಸ.ಕಾ.ಪಾ. ಎಂಜಿನಿಯರ್ ಶಿವಪ್ರಸನ್ನ, ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು, ಪ್ರಮುಖರಾದ ರವೀಶ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ರಮಾನಾಥ, ಗಣೇಶ್ ರೈ, ಮಚ್ಚೇಂದ್ರನಾಥ ಸಾಲ್ಯಾನ್, ವಸಂತ ಭಂಡಾರಿ, ಪುಷ್ಪರಾಜ್ ಭಂಡಾರಿ, ಸ್ಥಳೀಯ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.