Advertisement

ಪುಸ್ತಕಗಳ ಆಯ್ಕೆ ಪೂರ್ಣಗೊಳಿಸಲು ರಾಜಾ ಸೂಚನೆ

11:05 AM Nov 18, 2018 | Team Udayavani |

ಕಲಬುರಗಿ: ಜಿಲ್ಲಾ ಮಟ್ಟದ ಪುಸ್ತಕ ಖರೀದಿ ಸಮಿತಿ ಸದಸ್ಯರು ನ.30 ರೊಳಗಾಗಿ ಜಿಲ್ಲೆಯ ಲೇಖಕರಿಂದ ಸ್ವೀಕೃತವಾದ ಪುಸ್ತಕಗಳನ್ನು ಪರಿಶೀಲಿಸಿ ಅಂತಿಮ ಆಯ್ಕೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ತಿಳಿಸಿದರು.

Advertisement

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕರೆದ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2017-18ನೇ ಸಾಲಿನ ಮ್ಯಾಕ್ರೋ ಕ್ರಿಯಾ ಯೋಜನೆ ಅಡಿಯಲ್ಲಿ ಜಿಲ್ಲಾ ಮಟ್ಟದ ಪುಸ್ತಕ ಖರೀದಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಚ್‌ಕೆಆರ್‌ಡಿಬಿ ಜಿಲ್ಲೆಯ ಲೇಖಕರಿಂದ ಪುಸ್ತಕ ಖರೀದಿಸಲು 35 ಲಕ್ಷ ರೂ.ಗಳನ್ನು ನೀಡಿದೆ. ಜಿಲ್ಲೆಯಿಂದ ಸುಮಾರು 124 ಲೇಖಕರಿಂದ ಪುಸ್ತಕಗಳು ಸ್ವೀಕೃತವಾಗಿದ್ದು, ಎಲ್ಲ ಲೇಖಕರ ಪುಸ್ತಕ ಖರೀದಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಮಿತಿ ಸದಸ್ಯರು ಪಿ.ಹೆಚ್‌.ಡಿ. ಸಂಶೋಧನೆಗೆ
ನೀಡಿದ ಪ್ರಬಂಧ, ಕಲಬುರಗಿ ವಿಭಾಗ ಬಿಟ್ಟು ಬೇರೆ ಪ್ರದೇಶಗಳ ವ್ಯಕ್ತಿಗಳ ಪರಿಚಯ ಗ್ರಂಥ, ರಾಜಕೀಯ ಪಕ್ಷಗಳಿಗೆ ನೇರವಾಗಿ ಸಂಬಂಧಿಸಿದ ಪುಸ್ತಕಗಳು, ಅಭಿನಂಧನಾ ಗ್ರಂಥ, ಧಾರ್ಮಿಕ ಪ್ರಚೋದನೆ ಒಳಗೊಂಡ ಪುಸ್ತಕಗಳನ್ನು ಹೊರತುಪಡಿಸಿ ಉಳಿದ ಪುಸ್ತಕಗಳನ್ನು ಪರಿಶೀಲಿಸಿ, ಪುಸ್ತಕಗಳ ಮುದ್ರಣ, ವಿಷಯ, ಸಾಹಿತ್ಯ ಹಾಗೂ ಗುಣಮಟ್ಟಕ್ಕೆ ಅಂಕಗಳನ್ನು ನಿಗದಿಪಡಿಸಿ ಪುಸ್ತಕಗಳ ಆಯ್ಕೆ ಮಾಡಬೇಕು ಎಂದರು.

ಪುಸ್ತಕ ಆಯ್ಕೆ ಸಮಿತಿ ಸದಸ್ಯರು ಓದಿದ ಪುಸ್ತಕಗಳನ್ನು ತಮ್ಮ ತಮ್ಮಲ್ಲಿಯೇ ಬದಲಾಯಿಸಿಕೊಂಡು ಪುನಃ ಅಂಕಗಳನ್ನು ನೀಡಬೇಕು. ಹೀಗೆ ಮೂರು ಬಾರಿ ಪುಸ್ತಕಗಳನ್ನು ಪರಿಶೀಲಿಸಿ ಅಂಕ ನೀಡಿ, ಅಂಕಗಳ ಆಧಾರದ ಮೇಲೆ ಅಂತಿಮ ಪುಸ್ತಕಗಳನ್ನು ಆಯ್ಕೆ ಮಾಡಬೇಕು. ಅಂತಿಮವಾಗಿ ಆಯ್ಕೆ ಮಾಡಿದ ಪುಸ್ತಕಗಳನ್ನು ಕೂಲಂಕುಷವಾಗಿ ಓದಿ ಆಯ್ಕೆಗೆ ಶಿಫಾರಸು ಮಾಡಬೇಕು ಎಂದರು.

ಕಲಬುರಗಿಯು ವಿಭಾಗೀಯ ಕೇಂದ್ರವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೇಖಕರು ಇದ್ದಾರೆ. ಅವರು ಬರೆದಿರುವ ಪುಸ್ತಕಗಳನ್ನು ವಿಭಾಗದ ಎಲ್ಲ 1200 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ನೀಡಲು ಅನುಕೂಲವಾಗುವ ಹಾಗೆಯೇ ಪುಸ್ತಕ ಖರೀದಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಅಜಯಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್‌ ಮರಬನಳ್ಳಿ, ಔರಾದ(ಬಿ) ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ| ಗೌಸುದ್ದೀನ್‌ ತುಮಕೂರಕರ ಹಾಗೂ ಮತ್ತಿತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next