ದಾವಣಗೆರೆ: ಮುಂದಿನ ದಿನಗಳಲ್ಲಿ ಡೆಂಘೀ ಹಾಗೂ ಚಿಕೂನ್‌ಗುನ್ಯಾದಂಥ ಕೀಟಜನ್ಯ ರೋಗಗಳ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು ನಾಗರಿಕರು ತಮ್ಮ ಜವಾಬ್ದಾರಿ ಅರಿತು ತಮ್ಮ ಮನೆ ಹಾಗೂ ಸುತ್ತ-ಮುತ್ತಲಿನ ಸ್ಥಳಗಳನ್ನು ಶುಚಿಯಾಗಿರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಗುರುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ರಾಷ್ಟ್ರೀಯ ಡೆಂಘೀ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗಗಳ ಹರಡುವಿಕೆ ಹಾಗೂ ಜಾಗರೂಕತೆ ವಹಿಸಲು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.
ಮುನ್ನೆಚ್ಚರಿಕೆಯ ಕ್ರಮಗಳಾಗಿ ತೆರೆದಿಟ್ಟ ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಒಣಗಿಸಿ, ಪುನಃ ಭರ್ತಿ ಮಾಡಿಕೊಂಡು ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿ ಟೈರ್‌ಗಳನ್ನು ಬಿಸಾಡದೆ, ಅವುಗಳಲ್ಲಿ ನೀರು ಸಂಗ್ರಹವಾಗದಂತೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಡುವುದು ಇಲ್ಲವೇ ಆದಷ್ಟು ಶೀಘ್ರವಾಗಿ ಅವುಗಳನ್ನು ವಿಲೇವಾರಿ ಮಾಡುವುದು. ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಥವಾ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕೀಟ ಜನ್ಯರೋಗ ನಿಯಂತ್ರಣಾಧಿಕಾರಿ ಡಾ| ನಟರಾಜ್.ಕೆ ಮಾತನಾಡಿ, ನಿದ್ದೆ ಮಾಡುವ ಮಕ್ಕಳು ಹಾಗೂ ವಿಶ್ರಾಂತಿ ಪಡೆಯುವ ವೃದ್ಧರು ತಪ್ಪದೇ ರಾತ್ರಿ ವೇಳೆ ಅಲ್ಲದೆ ಹಗಲಿನಲ್ಲಿಯೂ ಸಹ ಸೊಳ್ಳೆ ಪರದೆ ಉಪಯೊಗಿಸಬೇಕು. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು ಮತು ಸೊಳ್ಳೆಗಳಿಂದ ಹರಡುವ ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆ ನಿಮಿತ್ತ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್ ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.
ಎಸ್ಪಿ ಎಚ್ಚರಿಕೆ
ಒಂದು ನಿಗದಿತ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳು ಕಂಡು ಬಂದರೆ ಆ ಸ್ಥಳದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗುವವರ ವಿರುದ್ಧ ಐಪಿಸಿ ಸೆಕ್ಷನ್ 270ಅಡಿ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ ಯಾವುದೇ ಅನುತ್ಪಾದಕ ವಸ್ತುಗಳು ಬಿದ್ದಿರುವ ಕಡೆ ಸೊಳ್ಳೆಗಳು ಆಶ್ರಯ ಪಡೆಯದಂತೆ ಆ ಸ್ಥಳವನ್ನು ಸ್ವಚ್ಛವಾಗಿರಿಸಿ ಕೊಳ್ಳಬೇಕಾಗಿರುವುದು ನಾಗರಿಕರ ಕರ್ತವ್ಯ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.