ಮಹಾನಗರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮದಿಂದಾಗಿ ನಗರದಲ್ಲಿ ಗುರುವಾರ ಸಂಜೆ ವೇಳೆಗೆ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಗಾಳಿ ಮಳೆಯಾಗಿದ್ದು, ಜನಜೀವನ ಕೂಡ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ಥಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಮಂಗಳೂರು ನಗರದಲ್ಲಿ ತುಸು ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸುಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದೆ. ನಗರದ ಉರ್ವಸ್ಟೋರ್, ಕೊಟ್ಟಾರ, ಕೊಟ್ಟಾರಚೌಕಿ, ಲೇಡಿಹಿಲ್, ಕಂಕನಾಡಿ, ಪಡೀಲ್ ಸಹಿತ ಮತ್ತಿತರ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು.
ನಗರದ ಮೇರಿಹಿಲ್ ಸಮೀಪದ ವಿಕಾಸ್ ಕಾಲೇಜು ಪಕ್ಕದಲ್ಲಿ ನೀರು ನಿಂತು ಸುತ್ತಮುತ್ತಲಿನ ಮನೆ, ಅಂಗಡಿಗಳಿಗೆ ತೊಂದರೆ ಉಂಟಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಈ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಸುವಾಗ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸಲಿಲ್ಲ. ಇದೇ ಕಾರಣದಿಂದ ರಸ್ತೆಯ ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿದು ಬರುವ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಸಂಜೆ ವೇಳೆ ಮಳೆ ಸುರಿದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನೆಗೆ ತೆರಳಲು ಕಷ್ಟಪಟ್ಟರು.
ನಗರದ ಪಂಪ್‌ವೆಲ್, ಕಂಕನಾಡಿ, ಬಲ್ಮಠ, ಪಿವಿಎಸ್, ಜ್ಯೋತಿ ಸ ಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕಷ್ಟ ಅನುಭವಿಸಿದರು. ನಗರ ಭಾಗಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದ್ದರಿಂದ ಕೆಲವು ಹೊತ್ತು ಟ್ರಾμಕ್ ಸಮಸ್ಯೆಯೂ ಎದುರಾಯ್ತು. ಬಹುದಿನಗಳಿಂದ ಮಳೆಯ ಮುನ್ಸೂಚನೆ ಇದ್ದರೂ ಕೊಡೆ, ರೈನ್ ಕೋಟ್ ಇಲ್ಲದೆ ಕೆಲಸಕ್ಕೆ ಬಂದವರೆಲ್ಲ ಸಂಜೆ ವೇಳೆ ಕೆಲಸದಿಂದ ಹಿಂದಿರುವಾಗ ಪರದಾಡುವಂತಾಯಿತು.
ಮೂರು ದಿನ ಮಳೆ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅ. 5ರ ಬಳಿಕ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ನಗರದಲ್ಲಿ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗ್ರಾಮಾಂತರ ಭಾಗದಲ್ಲೂ ಗುಡುಗು ಮಳೆ
ಉಳ್ಳಾಲ, ಕಿನ್ನಿಗೋಳಿ, ಹಳೆಯಂಗಡಿ, ಮೂಲ್ಕಿ, ಮೂಡಬಿದಿರೆ, ಬಜಪೆ ಸಹಿತ ಮಂಗಳೂರು ಗ್ರಾಮಾಂತರ ಭಾಗದಲ್ಲೂ ಗುರುವಾರ ಸಂಜೆ ವೇಳೆ ಗುಡುಗು ಸಹಿತ ಭಾರೀ ಗಾಳಿ, ಮಳೆಯಾಗಿದೆ. ಭಾರೀ ಮಿಂಚು, ಗುಡುಗು ಕಾಣಿಸಿಕೊಂಡಿದ್ದರಿಂದ ಹಲವೆಡೆ ಕೆಲಕಾಲ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು.