Advertisement
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎರಡೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳ ಸ್ವಂತ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
Related Articles
Advertisement
ಪ್ರತ್ಯೇಕ ಟ್ಯೂಷನ್: ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರವಾಗಿಲ್ಲ. ಆದರೆ, ಪಿಯುಸಿ ಫಲಿತಾಂಶ ಉತ್ತಮವಾಗಿಲ್ಲ. ಹಾಸ್ಟೆಲ್, ವಸತಿ ಶಾಲೆಗಳ ಹೆಚ್ಚಿನ ಮಕ್ಕಳು ಪಾಸಾಗುವಂತಾಗಬೇಕು. ಇದಕ್ಕಾಗಿ ಅವರಿಗೆ ಪ್ರತ್ಯೇಕ ಟ್ಯೂಷನ್ ಕೊಡಿಸುವಂತೆ ಹೇಳಿದರು.
ಜಾತಿ ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಯಾವುದೋ ಕಾರಣಕ್ಕೆ ಪ್ರಕರಣ ದಾಖಲಿಸಿ ನಂತರ ರಾಜೀ ಆಗಿಬಿಡುತ್ತಾರೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ಶಿಕ್ಷೆ ಯಾರಿಗೂ ಆಗುತ್ತಿಲ್ಲ. ಹೀಗಾಗಿ ಬೋಗಸ್ ಪ್ರಕರಣಗಳು ದಾಖಲಾಗದಂತೆ ಎಚ್ಚರಿಕೆವಹಿಸಿ ಎಂದ ಅವರು, ನಿಜವಾಗಿ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದರೆ, ಅಂತವರಿಗೆ ಕ್ರಮ ಆಗಬೇಕು ಎಂದರು. ಸಿಂಧುತ್ವ ಪ್ರಮಾಣ ಪತ್ರ ನೀಡಿಕೆಯೂ ಬೋಗಸ್ ಆಗುತ್ತಿದ್ದು, ಈ ಬಗ್ಗೆಯೂ ಎಚ್ಚರಿಕೆವಹಿಸಿ ಎಂದು ಹೇಳಿದರು.
ನರೇಗಾ ಹಣ ಬಳಸಿ: ಐಟಿಡಿಪಿ ಯೋಜನೆಯಡಿ ಬುಡಕಟ್ಟು ಸಮುದಾಯದವರ ಮನೆ ನಿರ್ಮಾಣಕ್ಕೆ 3.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಇವತ್ತಿನ ದರದಲ್ಲಿ ಈ ಹಣಕ್ಕೆ ಮನೆ ಕಟ್ಟಲಾಗಲ್ಲ ಎಂದು ಎಂಜಿನಿಯರಿಂಗ್ ವಿಭಾಗದವರು ಹೇಳುತ್ತಾರೆ ಎಂದು ಜಿಲ್ಲಾಧಿಕಾರಿ, ಸಚಿವರಿಗೆ ತಿಳಿಸಿದರು. ಈ ಯೋಜನೆಗೆ ಶೌಚಾಲಯ, ಮೆಟೀರಿಯಲ್, ಲೇಬರ್ ಕಾಂಪೋನೆಂಟ್ ಜೋಡಿಸಿ, ಎಲ್ಲವೂ ಸೇರಿದರೆ ಒಳ್ಳೆಯ ಮನೆ ಕಟ್ಟಿಸಬಹುದು ಎಂದು ಸಚಿವರು ಹೇಳಿದರು.
ಬುಡಕಟ್ಟು ಸಮುದಾಯದ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಕೌಶಲ್ಯ ತರಬೇತಿ ಕೊಡಿಸಿ, ಉದ್ಯೋಗ ಕಂಡುಕೊಳ್ಳಲು ದಾರಿ ತೋರಿಸಿ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಸೇರಿದಂತೆ ಸಮಾಜಕಲ್ಯಾಣ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಹಣ ವಾಪಸ್ ಮಾಡಿ: ರಾಜ್ಯದಲ್ಲಿ 2008-09ನೇ ಸಾಲಿನಿಂದ 6900 ಅಂಬೇಡ್ಕರ್ ಸಮುದಾಯ ಭವನಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿ, 1400 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಈವರೆಗೆ ಕೇವಲ 2,700 ಸಮುದಾಯ ಭವನಗಳು ನಿರ್ಮಾಣವಾಗಿವೆ. ಸರ್ಕಾರ ಬಿಡುಗಡೆ ಮಾಡಿದ ಹಣ ಜಿಲ್ಲಾಧಿಕಾರಿ, ಲ್ಯಾಂಡ್ ಆರ್ಮಿ, ನಿರ್ಮಿತಿ ಕೇಂದ್ರದ ಖಾತೆಗಳಲ್ಲಿ ಉಳಿದಿದೆ. ಪ್ರಗತಿಯೇ ಆಗುತ್ತಿಲ್ಲ. ಜನ ಸಮುದಾಯ ಭವನ ಬೇಡ ಅಂದರೆ, ನಿವೇಶನ ಕೊರತೆ ಇದ್ದರೆ ಹಣ ಇಟ್ಟುಕೊಂಡು ಏನು ಮಾಡ್ತೀರಾ? ಹಣವನ್ನು ಸರ್ಕಾರಕ್ಕೆ ವಾಪಸ್ ಮಾಡಿ ಎಂದು ಗೋವಿಂದ ಕಾರಜೋಳ ಸೂಚಿಸಿದರು.
ಗುಬ್ಬಿ-ಕಾಗೆ ಲೆಕ್ಕ ನಡೆಯಲ್ಲ: ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಮಾಹಿತಿ ಅಪ್‌ಡೇಟ್ ಮಾಡದಿದ್ರೆ ಮೀಟಿಂಗ್‌ಗೆ ಬರಬಾರದು. ಗುಬ್ಬಿ-ಕಾಗೆ ಲೆಕ್ಕ ಬರೆಯೋದಲ್ಲ. ಅದೆಲ್ಲ ನನ್ನ ಹತ್ತಿರ ನಡೆಯಲ್ಲ ಎಂದು ಅಧಿಕಾರಿಯನ್ನು ಸಚಿವ ಗೋವಿಂದ ಕಾರಜೋಳ ತರಾಟೆಗೆ ತೆಗೆದುಕೊಂಡರು. ಸರ್ಕಾರ ಬಿಡುಗಡೆ ಮಾಡಿದ ಹಣ ಇಟ್ಕೊಂಡು ಕುಳಿತುಕೊಂಡ್ರೆ ಏನು ಪ್ರಯೋಜನ, ಯೋಜನೆ ಅನುಷ್ಠಾನ ಮಾಡಿದರೆ ಅಸೆಟ್ ನಿರ್ಮಾಣವಾಗುತ್ತೆ ಎಂದರು. 30 ವರ್ಷದಿಂದ ಸರ್ವೀಸ್ ಮಾಡ್ತಿದ್ದೀರಿ, ಮಂತ್ರಿಗಳ ರಿವ್ಯೂ ಮೀಟಿಂಗ್ ಹೇಗಿರುತ್ತೆ ಗೊತ್ತಿರಲ್ವಾ ಎಂದು ತರಾಟೆಗೆ ತೆಗೆದುಕೊಂಡರು.
ಬ್ರಿಟಿಷರಂತೆ ಬ್ರೆಡ್ ಕೊಡಬೇಡಿ!: ಅಂಡಮಾನ್-ನಿಕೋಬಾರ್ ದ್ವೀಪದ ಬುಡಕಟ್ಟು ಜನರು ಬೇಟೆಯಾಡಿ, ಗೆಡ್ಡೆ ಗೆಣಸು ಕಿತ್ತು ತಿಂದು ಬದುಕುತ್ತಿದ್ದರು. ಅಲ್ಲಿಗೆ ಬ್ರಿಟಿಷರು ಬ್ರೆಡ್ ಕಳುಹಿಸುವ ವ್ಯವಸ್ಥೆ ಮಾಡಿದ ಮೇಲೆ ಅಲ್ಲಿನ ಬುಡಕಟ್ಟು ಜನರು ಬೇಟೆಯಾಡುವುದು, ಗೆಡ್ಡೆ ಗೆಣಸು ಕಿತ್ತು ತಿನ್ನುವುದನ್ನೇ ಬಿಟ್ಟು, ಬ್ರೆಡ್ ಹೊತ್ತು ತರುವ ಬ್ರಿಟಿಷರ ಬೋಟ್ ಕಾಯುತ್ತಾ ಕೂರುವಂತಾಯಿತು. ನಮ್ಮಲ್ಲಿನ ಬುಡಕಟ್ಟು ಜನರಿಗೂ ಅಧಿಕಾರಿಗಳು ಇಂತಹ ಸ್ಥಿತಿ ತರಬೇಡಿ. ಅವರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಕಂಡುಕೊಳ್ಳಲು ನೆರವಾಗಿ ಎಂದು ಸಚಿವ ಗೋವಿಂದ ಕಾರಜೋಳ ಕಿವಿಮಾತು ಹೇಳಿದರು.