Advertisement
ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಬುಧವಾರ ರಾತ್ರಿ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಆದರೆ ಗುರುವಾರ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಭಾರೀ ಗಾಳಿ ಬೀಸುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಕಳಸ ಸಮೀಪದ ಹೆಬ್ಟಾಳೆ ಸೇತುವೆ ಮುಳುಗಿ ಹೋಗಿರುವುದರಿಂದ ಕಳಸ-ಹೊರನಾಡು ಹಾಗೂ ಕಳಸ-ಕುದುರೆಮುಖದ ಸಂಪರ್ಕ ಕಡಿತಗೊಂಡಿದೆ.
ಹೇಮಾವತಿ ನದಿಯ ನೀರು ನುಗ್ಗಿದ ಪರಿಣಾಮ ನೂರಾರು ಎಕರೆ ಗದ್ದೆ ನೀರಲ್ಲಿ ಮುಳುಗಿ ಹೋಗಿದೆ. ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದ ಚೀಟಿಮಕ್ಕಿ ವಾಸಿ ಕಮಲ ಎಂಬುವವರ ಮನೆಯ ಮೇಲೆ ಮರಬಿದ್ದು,
ಮನೆಗೆ ಹಾನಿಯಾಗಿದೆ. ಅದೇ ರೀತಿ ಮಕಲಾಪುರ ಗ್ರಾಮ ಹಳ್ಳಿಬೈಲು ಕಮಲಾಕ್ಷಿ ಎಂಬುವವರ ಮನೆಯ ಮೇಲೂ ಮರ ಬಿದ್ದು ಸುಮಾರು 1.20 ಲಕ್ಷ ರೂ. ನಷ್ಟವುಂಟಾಗಿದೆ.