Advertisement
ಕಾರ್ಕಳ ನಗರದ ಪತ್ತೂಂಜಿಕಟ್ಟೆ 3 ಸೆಂಟ್ಸ್ ಕಾಲನಿ ನಿವಾಸಿ ಸುರೇಶ್ ಅವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದಿದೆ. ಮನೆಗೆ ಹಾನಿಯಾಗಿದ್ದು, ಮನೆಯಲ್ಲಿದ್ದ ಅವರ ಪುತ್ರಿ ಚೈತನ್ಯಾ ಅವರಿಗೆ ಗಾಯಗಳಾಗಿವೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಹಶೀಲ್ದಾರ್ ಪ್ರದೀಪ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಮಳೆಯಾದ ವರದಿಯಾಗಿದೆ. ಪುತ್ತೂರಿನ ಸವಾಣಾಲು, ಪೆರುವಾಜೆ, ಪಾಲ್ತಾಡಿ, ಕಡಬ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ ಇತ್ತು. ಉಳಿದಂತೆ ಬಿಸಿಲು ಮತ್ತು ಸೆಕೆಯಿಂದ ಕೂಡಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಮೋಡ ಮತ್ತು ಮಳೆಯಿಂದ ಕೂಡಿರುವ ವಾತಾವರಣ ಇರುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ 32.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.8 ಡಿ.ಸೆ. ಕಡಿಮೆ ಮತ್ತು 24.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2.9 ಡಿ.ಸೆ. ಹೆಚ್ಚು ಇತ್ತು.