Advertisement

Desi Swara: ರೈನ್‌ ಮೈನ್‌ ಕನ್ನಡ ಸಂಘದಿಂದ ನಾವಿಕೋತ್ಸವ ಭರ್ಜರಿ ಸಿದ್ಧತೆ

12:22 PM May 29, 2024 | Team Udayavani |

ಕನ್ನಡ ಬರೀ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ಎಂಬ ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಸಾಲು ಇಲ್ಲಿ ಅಕ್ಷರ ಸಹ ಕಾರ್ಯರೂಪವಾಗಿದೆ. ಜರ್ಮನಿಯ ರೈನ್‌ಮೈನ್‌ ಕನ್ನಡ ಸಂಘದ ಸಹಯೋಗದೊಂದಿಗೆ ಅಮೆರಿಕದ ನಾವಿಕ (ನಾವು ವಿಶ್ವ ಕನ್ನಡಿಗರ ಸಂಘ) ವು ಈ ಬಾರಿಯ ನಾವಿಕೋತ್ಸವ ಕಾರ್ಯಕ್ರಮವನ್ನು ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ನಡೆಸಲು ನಿರ್ಧರಿಸಿದೆ.

Advertisement

2011ರಿಂದಲೂ ನಾವಿಕ ಸಂಘವು ಪ್ರತೀ ವರ್ಷವೂ ನಾವಿಕೋತ್ಸವವನ್ನು ಆಚರಿಸುತ್ತಾ ಬಂದಿದ್ದು 4 ಬಾರಿ ಬೆಂಗಳೂರು, ಮೈಸೂರುಗಳಲ್ಲಿಯೂ ಅದ್ದೂರಿಯಿಂದ ನಾವಿಕೋತ್ಸವವನ್ನು ಆಚರಿಸಿದೆ. ಅಲ್ಲದೇ 6 ಬಾರಿ ಅಮೆರಿಕದ ಬೋಸ್ಟನ್‌, ನಾರ್ತ್‌ ಕರೋಲಿನ, ದಲ್ಲಾಸ್‌, ಲುಹಿಸ್‌ ಆಸ್ಟಿನ್‌ ಹಾಗೂ ಕೀನ್ಯಾದ ನೈರೋಬಿಯದಲ್ಲಿ 2020ರಲ್ಲಿ ಆನ್‌ಲೈನ್‌ನಲ್ಲಿ ನಾವಿಕೋತ್ಸವ ನಿರಂತರವಾಗಿ ನಡೆಯುತ್ತಾ ಬಂದಿದೆ. 2024ರ 7ನೇ ನಾವಿಕೋತ್ಸವ ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲು ಸಕಲ ಸಿದ್ಧತೆಗಳೂ ನಡೆಯುತ್ತಿದೆ. ಯುರೋಪ್‌ ಖಂಡದ ಪ್ರಪ್ರಥಮ ವಿಶ್ವಮಟ್ಟದ ಕನ್ನಡ ಸಮ್ಮೇಳನದಲ್ಲಿ ನಾವಿಕ ಹಾಗೂ ರೈನ್‌ಮೈನ್‌ ಕನ್ನಡ ಸಂಘದ ಜತೆಯಾಗಿ ಜರ್ಮನಿಯ ಇತರ 18 ಸಂಘಗಳೂ ಕೈ ಜೋಡಿಸಲು ಉತ್ಸಾಹ ಭರಿತವಾಗಿವೆ.

ನಾವಿಕೋತ್ಸವ ಕೇವಲ ಒಂದು ದಿನದ ಉತ್ಸವವಾಗದೆ ಅದಕ್ಕೆ ಪೂರ್ವ ತಯಾರಿಯ ಹಿನ್ನಲೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳಿಗಾಗಿ ಕಗ್ಗ ವಾಚನ ಸ್ಪರ್ಧೆಯನ್ನು ನಡೆಸಿ ಅದರ ಅಂಗವಾಗಿ ಆನ್‌ಲೈನ್‌ನಲ್ಲಿ ಡಿ.ವಿ.ಜಿ.ಯವರ ಮೊಮ್ಮಗಳಾದ ಶೋಭಾ ಸ್ವಾಮಿ, ಸರಿಗಮಪ ಖ್ಯಾತಿಯ ಶ್ರೀಹರ್ಷ ಅವರನ್ನು ಆಹ್ವಾನಿಸಿ ಬದುಕಿನ ಬುತ್ತಿಗೆ ಸವಿಯಾದ ನೆನಪನ್ನು ಉಳಿಸಿಕೊಟ್ಟರು. ಇದರೊಟ್ಟಿಗೆ ಮತ್ತಷ್ಟು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಯೋಜಿಸುವಲ್ಲಿ ಹಲವು ಕನ್ನಡ ಸಂಘಗಳು ನಿರತವಾಗಿವೆ.

ರೈನ್‌ಮೈನ್‌ ಕನ್ನಡ ಸಂಘದ ಯುಗಾದಿ ಕಾರ್ಯಕ್ರಮದಂದು ನಾವಿಕೋತ್ಸವಕ್ಕೆ ನೋಂದಾಯಿಸಿಕೊಂಡು, ಟಿಕೆಟ್‌ಗಳನ್ನು ಖರೀದಿಸುವುದಕ್ಕೆ ಅಧಿಕೃತವಾಗಿ ಚಾಲನೆ ನೀಡಿ ನಾವಿಕೋತ್ಸವಕ್ಕೆ ಪದಾಧಿಕಾರಿಗಳು, 50ಕ್ಕೂ ಹೆಚ್ಚು ಸ್ವಯಂ ಸೇವಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ.

Advertisement

ಕಾರ್ಯಕ್ರಮಕ್ಕೆ ಕಾನ್ಸುಲೇಟ್‌ ಜನರಲ್‌ ಆಫ್ ಇಂಡಿಯಾದವರಿಗೂ ಆಹ್ವಾನಿಸಲಾಗಿದ್ದು ಅವರು ಆರ್‌.ಎಂ.ಕೆ.ಎಸ್‌. ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಜುಲೈ 6ರಂದು ನಡೆಯಲಿರುವ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಕನ್ನಡದ ಹೆಮ್ಮೆಯ ಗಾಯಕ ರಾಜೇಶ್‌ ಕೃಷ್ಣನ್‌ ಅವರು ಬರಲಿದ್ದು ಕನ್ನಡಿಗರಲ್ಲಿ ಕಾರ್ಯಕ್ರಮದ ಬಗೆಗೆ ನಿರೀಕ್ಷೆ, ಆಸಕ್ತಿ ಹೆಚ್ಚಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಆಡಿಷನ್‌ ಹಾಗೂ ನವ ಬರಹಗಾರರಿಗೂ ಪ್ರೋತ್ಸಾಹಿಸಲು ಕವಿಗೋಷ್ಠಿಯನ್ನು ಯೋಜಿಸಲಾಗುತ್ತಿದೆ. ನಾವಿಕೋತ್ಸವಕ್ಕಾಗಿ ಹಲವಾರು ಸ್ಪಾನ್ಸರ್‌ಗಳು ಮುಂಬರುತ್ತಿದ್ದಾರೆ. ಸಾಲ್‌ಬಾವ್‌ ಹಾಗೂ ತಾಂತ್ರಿಕತೆಯ ಸುಲಭ ನಿರ್ವಹಣೆಗೂ ಗಮನಹರಿಸಲಾಗುತ್ತಿದೆ. ಭಾರತದಿಂದಲೂ ಹಲವರು ಕಾರ್ಯಕ್ರಮದಲ್ಲಿ ತೊಡಗಬೇಕಿರುವ ಹಿನ್ನಲೆಯಲ್ಲಿ ಅದರ ಚಟುವಟಿಕೆಯೂ ಬಿರುಸಾಗಿ ನಡೆಯುತ್ತಿದೆ.

ಸಂಸ್ಕೃತಿ, ಸಂಗಮ, ಸಂಭ್ರಮದ ಈ ಸಮಾಗಮ ಸ್ಮರಣೆಯಲ್ಲಿ ಉಳಿಯಲು “ಮೈ ನಾಕ’ ಸ್ಮರಣ ಸಂಚಿಕೆಯ ಕಾರ್ಯಗಳೂ ನಡೆಯುತ್ತಿದೆ. ಒಟ್ಟಾರೆ ವಿಶ್ವ ಕನ್ನಡಿಗರಿಗೆ ಇದೊಂದು ಮರೆಯದ ದಿನವಾಗಿ ಉಳಿಯಲು ಸಕಲ ಸಿದ್ಧತೆಗಳೂ ಭರದಿಂದ ಸಾಗಿದೆ.
ವಿಶ್ವ ಕನ್ನಡಿಗರನ್ನು ಬೆಸೆಯುವ ಕನ್ನಡದ ಹಬ್ಬ ನಿತ್ಯೋತ್ಸವವಾಗಿ ಎಲ್ಲರ ಮನದಲ್ಲಿ ಉಳಿಯಲಿ. ಸಾಗರದಾಚೆ ನಮ್ಮ ಸಂಸ್ಕೃತಿಯ ಸಂಗಮ ಎಲ್ಲರಿಗೂ ಸಂಭ್ರಮ ತರಲಿ.

ವರದಿ: ಶೋಭಾ ಚೌಹಾಣ್‌, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next