ಬೆಂಗಳೂರು: 2023ರ ಐಪಿಎಲ್ ನ ಲೀಗ್ ಹಂತದ ಅಂತಿಮ ದಿನವಿಂದು. ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ- ಹೈದರಾಬಾದ್, ಎರಡನೇ ಪಂದ್ಯದಲ್ಲಿ ಬೆಂಗಳೂರು- ಗುಜರಾತ್ ತಂಡಗಳು ಸೆಣಸಲಿದೆ. ಇಂದಿನ ಪಂದ್ಯ ಗೆದ್ದರೆ ಆರ್ ಸಿಬಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.
ಆದರೆ, ಈ ಮಹತ್ವದ ಪಂದ್ಯದ ಮೇಲೆ ಮಳೆಯ ಕರಿಛಾಯೆ ಮೂಡಿದೆ. ಪಂದ್ಯಕ್ಕೆ ಕೇವಲ ಒಂದು ದಿನದ ಮೊದಲು ಅಂದರೆ ಶನಿವಾರ ನಗರದಲ್ಲಿ ಮಳೆಯಾಗಿದೆ. ರವಿವಾರ ಸಂಜೆಯೂ ಮಳೆಯಾಗುವ ಸಾಧ್ಯತೆಯಿದ್ದು, ಆರ್ ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಅಕ್ಯುವೆದರ್ ಪ್ರಕಾರ, ಆಟಕ್ಕೆ ಮಳೆ ಅಡ್ಡಿಪಡಿಸುವ ಹೆಚ್ಚಿನ ಸಂಭವನೀಯತೆ ಇದೆ. ಮಧ್ಯಾಹ್ನ ಪ್ರಾರಂಭವಾಗುವ ತುಂತುರು ಮಳೆ ದಿನವಿಡೀ ಬರುವ ನಿರೀಕ್ಷೆಯಿದೆ. ಪಂದ್ಯದ ವೇಳೆಯಲ್ಲಿ ಶೇ.50ಕ್ಕೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.
ಒಂದು ವೇಳೆ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಓವರ್ ಕಡಿತಗೊಳಿಸಿ ಪಂದ್ಯ ನಡೆಸಬಹುದು. ಆದರೆ ಸಂಪೂರ್ಣ ಮಳೆ ಬಂದು ಪಂದ್ಯ ರದ್ದಾದರೆ ಆರ್ ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಪಂದ್ಯ ರದ್ದಾದರೆ ಉಭಯ ತಂಡಗಳೂ ತಲಾ ಒಂದು ಅಂಕ ಹಂಚಿಕೊಳ್ಳಲಿದೆ. ಈ ಫಲಿತಾಂಶವು ಪ್ರಸ್ತುತ 14 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಯೋಜನವಾಗುವುದಿಲ್ಲ. ಹೆಚ್ಚುವರಿ ಪಾಯಿಂಟ್‌ನೊಂದಿಗೆ, ಅವರು 15 ಅಂಕಗಳನ್ನು ತಲುಪುತ್ತಾರೆ. ಆಗ ಆರ್ ಸಿಬಿ ಪ್ಲೇ ಆಫ್ ಸನ್ನಿವೇಶವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮುಂಬೈ ಇಂಡಿಯನ್ಸ್ ಆಟದ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಸದ್ಯ 14 ಅಂಕ ಹೊಂದಿರುವ ಮುಂಬೈ ಇಂಡಿಯನ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್ ತಲುಪಲಿದೆ.
ಒಂದು ವೇಳೆ ಮೊದಲ ಪಂದ್ಯದಲ್ಲಿ ಮುಂಬೈ ಸೋತರೆ ಆಗ ಬೆಂಗಳೂರು ಪಂದ್ಯ ರದ್ದಾದರೂ ಆರ್ ಸಿಬಿಗೆ ನಷ್ಟವಾಗದು. 15 ಅಂಕಗಳೊಂದಿಗೆ ಅದು ಮುಂದಿನ ಹಂತ ಪ್ರವೇಶಿಸಲಿದೆ. ಒಂದು ವೇಳೆ ಮುಂಬೈ ಮತ್ತು ಆರ್ ಸಿಬಿ ಎರಡೂ ತಮ್ಮ ಪಂದ್ಯಗಳನ್ನು ಸೋತರೆ ( ಆರ್ ಸಿಬಿ ಐದಕ್ಕಿಂತ ಹೆಚ್ಚು ರನ್ ಅಂತರದಿಂದ ಸೋತರೆ) ಆಗ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಲಿದೆ.