ನವದೆಹಲಿ: ಈಗಾಗಲೇ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಹಾನಿಯುಂಟು ಮಾಡಿರುವ ಮಳೆಯು ಆ.6ರ ನಂತರ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಸ್ಸಾದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಶನಿವಾರ ಎಚ್ಚರಿಸಿದೆ.
ಮಹಾರಾಷ್ಟ್ರ, ಗೋವಾ, ತೆಲಂಗಾಣ, ಛತ್ತೀಸ್‌ಗಢ ಮತ್ತು ಒಡಿಸ್ಸಾದಲ್ಲಿ ಆ.8 ಮತ್ತು 9ರಂದು ಭಾರೀ ಮಳೆಯಾಗಲಿದೆ. ತೆಲಂಗಾಣ, ಕರ್ನಾಟಕದ ಉತ್ತರ ಮತ್ತು ಕರಾವಳಿ ಭಾಗ, ಆಂಧ್ರದ ಕರಾವಳಿ ಭಾಗ, ಯಾನಂ, ಕೇರಳ ಮತ್ತು ಮಹೆ ಪ್ರದೇಶದಲ್ಲಿ ಆ.5ರಿಂದ 9ರವರೆಗೆ, ಕರ್ನಾಟಕದ ದಕ್ಷಿಣ ಭಾಗದಲ್ಲಿ ಆ.5ರಿಂದ ಆ.8ರವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಭಾರತದ ಮಧ್ಯ ಭಾಗ ಮತ್ತು ಪಶ್ಚಿಮ ಕರಾವಳಿಯಲ್ಲಿ ಆ.7 ಮತ್ತು 8ರಂದು ಅತಿ ಹೆಚ್ಚು ಮಳೆ ಸುರಿಯಲಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಲಾಗಿದೆ.
ಇಡುಕ್ಕಿ ಆಣೆಕಟ್ಟು ನೀರು ಹೊರಗೆ:
ಕೇರಳದ ಇಡುಕ್ಕಿ ಜಲಾಶಯದ ಚೆರುಥೋನಿ ಆಣೆಕಟ್ಟಿನ ನೀರಿನ ಮಟ್ಟ 2,382 ಅಡಿಗಿಂತ ಹೆಚ್ಚಿದ್ದು, ಆಣೆಕಟ್ಟನ್ನು ನಿರ್ವಹಿಸುತ್ತಿರುವ ಕೇರಳ ರಾಜ್ಯ ವಿದ್ಯುತ್ ಮಂಡಳಿ ರೆಡ್ ಅಲರ್ಟ್ ಘೋಷಿಸಿದೆ.
ಆ ಹಿನ್ನೆಲೆ ಭಾನುವಾರದಂದು ಆಣೆಕಟ್ಟಿನಿಂದ ನೀರು ಹೊರಬಿಡಲಾಗುವುದು ಎಂದು ತಿಳಿಸಲಾಗಿದೆ. ತಮಿಳುನಾಡು ಸರ್ಕಾರ ನಿರ್ವಹಿಸುತ್ತಿರುವ ಮುಲ್ಲಪೆರಿಯಾರ್ ಆಣೆಕಟ್ಟಿನಲ್ಲೂ ನೀರಿನ ಮಟ್ಟ ಹೆಚ್ಚಿದ್ದು, 2,122 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.