Advertisement

ಜಡಿ ಮಳೆಗೆ ಮನೆಯಿಂದ ಹೊರಬಾರದ ಜನ

03:09 PM Dec 12, 2022 | Team Udayavani |

ಕುದೂರು: ವಾಯುಭಾರ ಕುಸಿತದಿಂದ ಹೋಬಳಿಯಾದ್ಯಂತ ಮಳೆಯಾಗುತ್ತಿದೆ. ಮೋಡ ಮುಸುಕಿದ ವಾತಾವರಣ ಹಾಗೂ ಜಿಟಿ, ಜಿಟಿ ಮಳೆ. ಮೈಕೊರೆಯುವ ಚಳಿಯಿಂದ ಮನೆಯಿಂದ ಹೊರ ಬರಲಾಗದೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬದುಕು ಮುರಾಬಟ್ಟೆಯಾಗಿದೆ. ಶನಿವಾರ ಮುಂಜಾನೆಯಿಂದಲೇ ಬೀಳುತ್ತಿರುವ ತುಂತುರು ಮಳೆಗೆ ಜೀವನ ಅಸ್ತವ್ಯಸ್ತವಾಗಿದೆ. ತುಂತುರು ಮಳೆಗೆ ರೈತರು ಜನರು, ನೌಕರರು, ಕಾರ್ಮಿಕರು ಹೈರಾಣಾಗಿದ್ದಾರೆ. ತುಂತುರು ಮಳೆ ಎಡೆಬಿಡದ ಸುರಿಯುತ್ತಿರುವ ಕಾರಣ ಜನರು ಪರಾದಾಡಿದರು. ಮಳೆಯ ಜೊತೆಗೆ ವಿಪರೀತ ಚಳಿಯಿದ್ದ ಕಾರಣ ಬಹುತೇಕರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಚಂಡಮಾರುತದಿಂದ ಸುರಿಯುತ್ತಿರುವ ಮಳೆಗೆ ರಾಗಿ ಫಸಲು ನೆಲ ಕಚ್ಚಿರುವುದರಿಂದ ರೈತರು ಕಣ್ಣೀರು ಸುರಿಸುವ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ರೈತರು ಫಸಲು ಒಕ್ಕಣೆ ಮಾಡಲು ತಮ್ಮ ಕೃಷಿ ಜಮೀನುಗಳಲ್ಲಿ ರಾಗಿ ಕಟಾವು ಮಾಡಿದ್ದರು. ಮಳೆಯಿಂದ ರಾಗಿ ಪೈರು ಮೊಳಕೆಯೊಡೆಯುತ್ತದೆ ಎಂಬ ಆಂತಕ ರೈತರಲ್ಲಿದೆ. ಈ ಚಂಡಮಾರುತ ಮಳೆಯಿಂದ ರೈತರ ರಾಗಿ ಫಸಲು ಮಳೆ ಹನಿಗೆ ನೆನೆದು ಹೋಗಿದೆ. ಇದರಿಂದ ರೈತ ಸಂಕಷ್ಟಕೀಡಾಗಿದ್ದಾನೆ, ಮಳೆಯಿಂದ ತರಕಾರಿ, ಬೀನ್ಸ್‌, ಅವರೆಕಾಯಿ, ಸೊಪ್ಪುಗಳು ಕೊಳೆಯುತ್ತಿವೆ.

ರಸ್ತೆ ಬದಿ ವ್ಯಾಪಾರಿಗಳಿಗೆ ಸಂಕಷ್ಟ: ಶುಕ್ರವಾರ ಸಂಜೆಯಿಂದ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವುದರಿಂದ ಮತ್ತು ವಿಪರೀತ ಥಂಡಿ ಇರುವುದರಿಂದ ಸಾರ್ವಜನಿಕರು ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ಉಂಟಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲದೆ. ತಳ್ಳುಗಾಡಿಯಲ್ಲಿ ತಂದ ಸೊಪ್ಪು ತರಕಾರಿ ವಾಪಸ್ಸು ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು. ಜಡಿ ಮಳೆಗೆ ರಸ್ತೆ ಬದಿ ವ್ಯಾಪಾರ ನಡೆಸುವ ತರಕಾರಿ ಹೂವು, ಹಣ್ಣು ಇನ್ನೂ ಮುಂತಾದ ಸಣ್ಣ ವ್ಯಾಪಾರಿಗಳು ವಹಿವಾಟು ನಡೆಸಲಾಗದೇ ಬಂಡವಾಳ ಹಾಕಿದ ವಸ್ತುಗಳು ಕೊಳೆಯುತ್ತಿದ್ದು, ನಷ್ಟ ಅನುಭವಿಸುವಂತಾಗಿದೆ. ಗ್ರಾಮದ ಅಂಗಡಿ ಮಳಿಗೆಗಳಲ್ಲೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂತು.

ಹಾಲು ಪೇಪರ್‌ ವಿತರಕರ ಸಂಕಟ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಗೆ ಮುಂಜಾನೆಯೇ ಎದ್ದು ಹಾಲು ಪೇಪರ್‌ ಮನೆ ಬಾಗಿಲಿಗೆ ತಲುಪಿಸುವವರ ಕಷ್ಟ ಹೇಳ ತೀರದಾಗಿದ್ದು, ಕೊರೆಯುವ ಚಳಿ, ಹಾಗೂ ಜಡಿ ಮಳೆಯಲ್ಲಿ ತೊಯ್ದುಕೊಂಡೇ ದಿನನಿತ್ಯದ ವ್ಯಾಪಾರವನ್ನು ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಕಟಾವಿಗೆ ಬಂದ ರಾಗಿ ಬೆಳೆಗೆ ಕಂಟಕ: ರಾಗಿ ಬೆಳೆ ಹಲವೆಡೆ ಕಟಾವಿಗೆ ಬಂದಿದ್ದು, ಕೆಲವು ರೈತರು ತೆನೆ ಕಟಾವು ಮಾಡಿಕೊಂಡು ಮನೆಗಳಿಗೆ ತುಂಬಿಸಿಕೊಂಡಿದ್ದಾರೆ. ಕೆಲವರು ಯಂತ್ರಗಳಲ್ಲಿ ಕಟಾವು ಮಾಡಿಸಲು ಕಾಯುತ್ತಿದ್ದಾರೆ. ಮಳೆಯಾಗು ತ್ತಿರುವ ಕಾರಣ ರಾಗಿಯು ತೆನೆಗಳಲ್ಲೇ ಮೊಳಕೆಯೊಡೆಯುವ ಸಂಭವವಿರುವ ಕಾರಣ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಎಂದು ರೈತ ಮಹೇಶ್‌ ತಿಳಿಸಿದರು.

ಜಡಿ ಮಳೆಯಿಂದ ವ್ಯಾಪಾರ ನಡೆಸಲು ಕಷ್ಟವಾಗಿದೆ. ಪ್ರತಿದಿನ ಕನಿಷ್ಠ ನೂರು ರೂ. ದುಡಿಯಲಾಗದೆ ಮನೆಗೆ ಹಿಂತಿರುಗುವಂತಾಗಿದೆ. ಸುಂಕ, ಮನೆ ಬಾಡಿಗೆ, ದಿನ ನಿತ್ಯದ ಖರ್ಚು ಭರಿಸಲಾಗದೇ ಪರಿತಪಿಸುವಂತಾಗಿದೆ. ಮಂಜುನಾಥ್‌, ರಸ್ತೆ ಬದಿ ವ್ಯಾಪಾರಿ, ಕುದೂರು

ಕೊರೆಯುವ ಚಳಿ ಹಾಗೂ ತುಂತುರು ಮಳೆಯ ನಡುವೆ ಬೆಳಗ್ಗೆಯೇ ಎದ್ದು ಪೇಪರ್‌ ತಲುಪಿಸಲು ಬಹಳ ಕಷ್ಟವಾಗಿದೆ. ಕಷ್ಟ ಪಟ್ಟು ತಲುಪಿದರೂ ಪೇಪರ್‌ ಗಳೆಲ್ಲ ನೆನೆಯುತ್ತಿದ್ದು ಬೇಸರವಾಗುತ್ತಿದೆ. ಶಿವಶಂಕರ್‌, ಪತ್ರಿಕಾ ವಿತರಕ, ಕುದೂರು

 

Advertisement

Udayavani is now on Telegram. Click here to join our channel and stay updated with the latest news.

Next